ಬೆಂಗಳೂರು:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಯಶಸ್ವಿಯಾಗಿ ನಡೆಯುತ್ತಿದೆ. ಇದೇ ಐಪಿಎಲ್ ಪಂದ್ಯದ ವೇಳೆ ಕೆಲ ಕಿಡಿಗೇಡಿಗಳು ಕ್ರಿಕೆಟ್ ಕಿಟ್ ಅನ್ನು ಕದ್ದಿದ್ದರು. ಇದೀಗ ಬೆಂಗಳೂರು ಪೊಲೀಸರು ಕ್ರಿಕೆಟ್ ಕಿಟ್ ಸಮೇತ ಇಬ್ಬರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಹೌದು, ಕಳೆದ 10 ದಿನಗಳ ಹಿಂದೆ ದೆಹಲಿ ಹಾಗೂ ಆರ್ ಸಿಬಿ ಪಂದ್ಯದ ವೇಳೆ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳುವಾಗಿತ್ತು. ಈ ಬಗ್ಗೆ ದೆಹಲಿ ಪೊಲೀಸರಿಗೆ ದೆಹಲಿ ತಂಡದ ಮ್ಯಾನೇಜ್ಮೆಂಟ್ ದೂರು ನೀಡಿತ್ತು. ಈ ಸಂಬಂಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದರು.
ಪ್ರಕರಣದ ತನಿಖೆ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ಕಳವುವಾಗಿರುವ ಅನುಮಾನವಿದ್ದರಿಂದ ಡೆಲ್ಲಿ ಕ್ಯಾಪಿಟಲ್ ತಂಡ ಈ ಬಗ್ಗೆ ಬೆಂಗಳೂರು ಪೊಲೀಸರನ್ನು ಸಂಪರ್ಕ ಮಾಡಿದ್ದರು. ಬೆಂಗಳೂರು ಪೊಲೀಸರು ತೀವ್ರ ತನಿಖೆ ನಡೆಸಿದ್ದು, ಕೊನೆಗೂ ಡೆಲ್ಲಿ ಕ್ಯಾಪಿಟಲ್ ತಂಡದ ಕ್ರಿಕೆಟ್ ಕಿಟ್ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಕಳವಾಗಿದ್ದ ಬ್ಯಾಟ್ಗಳು, ಗ್ಲೌಸ್, ಹೆಲ್ಮೇಟ್, ಪ್ಯಾಡ್ ಸೇರಿ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ.
ಕ್ರಿಕೆಟ್ ಆಡಲು ಬ್ಯಾಟ್-ಬಾಲ್ ಕಳ್ಳತನ ಮಾಡಿದೆ-ಬಂಧಿತ ಆರೋಪಿಗಳ ಹೇಳಿಕೆ: ಆಟಗಾರರ ಕ್ರಿಕೆಟ್ ಕಿಟ್ಗಳನ್ನು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಸಾಗಿಸುವಾಗ ವಾಹನದಲ್ಲಿದ್ದ ಚಾಲಕ ಚೆಲುವರಾಜ್ ಹಾಗೂ ಕೊರಿಯರ್ ಬಾಯ್ ಸುಧಾಂಶು ಕುಮಾರ್ ನಾಯಕ್ ಎಂಬುವರೇ ಕಳ್ಳತನ ಮಾಡಿದ ಆರೋಪದಡಿ ಇಬ್ಬರನ್ನು ಬಂಧಿಸಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಆಟಗಾರರ ಕಿಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಸಾಗಾಟ ಹೊಣೆ ಹೊತ್ತಿದ್ದ ಎಕ್ಸ್ ಪ್ರೆಸ್ ಪ್ರೈಟ್ ಸಿಸ್ಟಂ ಕಂಪೆನಿಯಲ್ಲಿ ಚೆಲುವರಾಜ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಡೆಲ್ಲಿ ಹಾಗೂ ಬೆಂಗಳೂರು ಕ್ರಿಕೆಟ್ ಪಂದ್ಯ ನಡೆದಿತ್ತು. ಆಟದ ಬಳಿಕ ಮುಂದಿನ ಪಂದ್ಯಕ್ಕಾಗಿ ದೆಹಲಿ ಪ್ರಯಾಣ ಬೆಳೆಸಿದ್ದರು. ಆಟಗಾರರ ಕಿಕ್ರೆಟ್ಗಳನ್ನು ಏರ್ ಪೋರ್ಟ್ಗೆ ಸಾಗಿಸಲು ಕಂಪನಿ ಜವಾಬ್ದಾರಿ ವಹಿಸಿಕೊಂಡಿತ್ತು. ಇದರಂತೆ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟಗಾರರಾದ ಡೇವಿಡ್ ವಾರ್ನರ್, ಮಿಶೆಲ್ ಮಾರ್ಷ್ ಸೇರಿದಂತೆ ಇನ್ನಿತರ ಆಟಗಾರರ ಬ್ಯಾಟ್, ಪ್ಯಾಡ್ ಒಳಗೊಂಡಂತೆ ಕಿಟ್ಗಳನ್ನು ಏರ್ ಪೋರ್ಟ್ ಸಾಗಿಸುವಾಗ ಮಾರ್ಗ ಮಧ್ಯೆ ಆರೋಪಿಗಳು ಬ್ಯಾಟ್ ಗಳನ್ನು ಕಳ್ಳತನ ಮಾಡಿದ್ದರು.