ಬೆಂಗಳೂರು:ಅಡಿಕೆಯ ಕನಿಷ್ಠ ಆಮದಿಗೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕಲು ಶೀಘ್ರದಲ್ಲೇ ಒಂದು ನಿಯೋಗ ಭೇಟಿ ಮಾಡಲು ನಿರ್ಣಯ ಆಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ. ಅಡಿಕೆ ಕಾರ್ಯಪಡೆ ಸಭೆಯ ಬಳಿಕ ವಿಕಾಸಸೌಧದಲ್ಲಿ ಮಾತನಾಡಿದ ಅವರು, ಇವತ್ತು ಅಡಿಕೆ ಕಾರ್ಯಪಡೆ ಸಭೆ ಮಾಡಿದ್ದೇವೆ. ವಿಶೇಷವಾಗಿ ಅಡಿಕೆ ಆರೋಗ್ಯಕ್ಕೆ ಆರೋಗ್ಯಕರ ಅಲ್ಲ ಹಾನಿಕಾರಕ ಎಂದು ಹಿಂದಿನ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ವರದಿ ಸಲ್ಲಿಸಿತ್ತು. ಅದರ ಕೇಸ್ ಇವತ್ತು ಕೂಡಾ ಸುಪ್ರೀಂ ಕೋರ್ಟ್ನಲ್ಲಿದೆ ಎಂದು ಟೀಕಿಸಿದರು.
ಅಡಿಕೆ ಆರೋಗ್ಯಕರ ಎಂಬ ಆಲೋಚನೆ ಇತ್ತು. ಹೀಗಾಗಿ ರಾಮಯ್ಯ ವಿಶ್ವವಿದ್ಯಾಲಯಕ್ಕೆ ಒಂದು ವರ್ಷದ ಹಿಂದೆ ಇದರ ಕುರಿತು ಸಂಶೋಧನೆ ಮಾಡಲು ತಿಳಿಸಿದ್ದೆವು. ಅಡಿಕೆ ಕಾರ್ಯಪಡೆಯಿಂದ ಜವಾಬ್ದಾರಿ ನೀಡಲಾಗಿತ್ತು. ಸಂಶೋಧನೆ ನಡೆಸಿದ ವಿಶ್ವವಿದ್ಯಾಲಯದಿಂದ ಪ್ರಾಥಮಿಕ ವರದಿ ಬಂದಿದೆ. ವರದಿ ಕುರಿತು ಚರ್ಚೆ ಮಾಡಿದ್ದೇವೆ. ಸಂತೋಷಕರ ವಿಷಯ ಎಂದರೆ ಅಡಿಕೆ ಹಾನಿಕಾರಕ ಅಲ್ಲ ಎಂಬುದು ವರದಿಯಿಂದ ತಿಳಿದು ಬಂದಿದೆ.
ಅಡಿಕೆಯಲ್ಲಿ ವೈದ್ಯಕೀಯ ಲಕ್ಷಣಗಳು ಇವೆ ಎಂದು ವರದಿಯಲ್ಲಿ ಹೇಳಿದ್ದಾರೆ. ಹಾಗಾಗಿ ಅಡಿಕೆ ಬಗ್ಗೆ ಇನ್ನೊಂದು ಪೂರ್ಣವಾದ ವರದಿ ಕೊಡ್ತಾರೆ. ಅಧಿಕ ರಕ್ತದೊತ್ತಡ ನಿಯಂತ್ರಣ, ಡಯಾಬಿಟಿಸ್, ಹೊಟ್ಟೆ ನೋವಿಗೆ ಅಡಿಕೆ ಔಷಧ ಆಗ್ತಾ ಇದೆ. ಗಾಯ ಗುಣಪಡಿಸಲು ಅಡಿಕೆ ಉತ್ತಮವಾಗಿರುವಂತೆ ಫಲಿತಾಂಶ ನೀಡಿದೆ. ಅದೇ ರೀತಿ ಎಲೆ ಚುಕ್ಕಿ ರೋಗಕ್ಕೆ ಸಂಶೋಧನೆಗೆ ಶಿವಮೊಗ್ಗ ವಿಶ್ವವಿದ್ಯಾಲಯಕ್ಕೆ ಅನುದಾನ ನೀಡುವ ಬಗ್ಗೆ ತೀರ್ಮಾನ ಮಾಡಿದ್ದೇವೆ ಎಂದರು.