ಬೆಂಗಳೂರು: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಪ್ರತಿಮೆ ವಿಧಾನಸೌಧ ಆವರಣದಲ್ಲಿ ಮರು ಸ್ಥಾಪಿಸುವ ವಿಚಾರದಲ್ಲಿ ಸರ್ಕಾರ ಮಾತು ತಪ್ಪಿದೆ ಎಂದು ಕಾಂಗ್ರೆಸ್ ಸದಸ್ಯ ಕೆ.ಗೋವಿಂದರಾಜ್ ಹಕ್ಕುಚ್ಯುತಿ ಮಂಡಿಸಿದರು.
ವಿಧಾನ ಪರಿಷತ್ನಲ್ಲಿ ಮಾತನಾಡಿದ ಅವರು, ಸರ್ಕಾರ ನೀಡಿದ್ದ ಭರವಸೆ ಈಡೇರಿಸಿಲ್ಲ. ಮೆಟ್ರೋ ಕಾಮಗಾರಿ ಸಂದರ್ಭ ಮೂಲ ಸ್ಥಳದಿಂದ ಬೇರೆಡೆ ನೆಹರೂ ಪ್ರತಿಮೆಯನ್ನು ಸ್ಥಳಾಂತರಿಸಲಾಗಿತ್ತು. ಆದರೆ ಕಾಮಗಾರಿ ಮುಗಿದು ಸಾಕಷ್ಟು ಸಮಯ ಕಳೆದಿದ್ದರೂ ನೆಹರೂ ಪ್ರತಿಮೆಯನ್ನು ಮತ್ತೆ ಮೂಲ ಸ್ಥಾನಕ್ಕೆ ಹೊಂದಿರುವ ಕಾರ್ಯ ಆಗಿಲ್ಲ.
ಕಳೆದ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾದಾಗ ಸರ್ಕಾರ ಮರಳಿ ಮೂಲ ಸ್ಥಾನಕ್ಕೆ ನೆಹರೂ ಪ್ರತಿಮೆ ಸ್ಥಳಾಂತರಿಸುವ ಭರವಸೆ ನೀಡಿತ್ತು. ಆದರೆ ತಿಳಿಸಿದ್ದ ದಿನಾಂಕಕ್ಕೆ ಸ್ಥಳಾಂತರ ಕಾರ್ಯ ಆಗಿಲ್ಲ. ಈಗಲೂ ನೆಹರೂ ಪ್ರತಿಮೆ ಮೂಲ ಸ್ಥಾನಕ್ಕೆ ವಾಪಸ್ ಆಗಿಲ್ಲ. ಸದನದಲ್ಲಿ ಕೊಟ್ಟ ಭರವಸೆ ಈಡೇರಿಸದೆ ಹಕ್ಕುಚ್ಯುತಿ ಉಂಟಾಗಿದೆ ಎಂದು ಗೋವಿಂದರಾಜ್ ಆರೋಪಿಸಿದರು.
ಈ ವಿಚಾರವನ್ನು ಹಕ್ಕುಚ್ಯುತಿ ಅಡಿ ನಮೂದಿಸಿ ಹಕ್ಕು ಬಾಧ್ಯತಾ ಸಮಿತಿಗೆ ವಹಿಸಬೇಕು ಎಂದು ಒತ್ತಾಯಿಸಿದರು. ಸಭಾಪತಿಗಳು ಈ ವಿಚಾರವನ್ನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಅಗತ್ಯವಿರುವ ಮಾಹಿತಿಗಾಗಿ ಕಲಾಪದ ದಾಖಲೆ ಇಲ್ಲವೇ ಮಾಧ್ಯಮಗಳ ವರದಿ ಆಧರಿಸಿ ಕೂಲಂಕಶ ತನಿಖೆ ನಡೆಸಿ ಎಂದು ಸೂಚಿಸಿದರು.
ಇದನ್ನೂ ಓದಿ:7 ಸರ್ಕಾರಿ ಲಂಚಾಸುರ ಅಧಿಕಾರಿಗಳ ಮೇಲೆ ಎಸಿಬಿ ದಾಳಿ: ಪತ್ತೆಯಾದ ನಗನಾಣ್ಯ ಎಷ್ಟು ಗೊತ್ತಾ?