ಬೆಂಗಳೂರು :ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಧ್ಯಂತರ ಪರಿಹಾರ ನೀಡಲು ನ್ಯಾಯಾಲಯಗಳು ವಿಳಂಬ ಮಾಡುತ್ತಿರುವ ಸಂಬಂಧ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅರ್ಜಿಗಳು ಸಕಾಲಕ್ಕೆ ವಿಲೇವಾರಿ ಸಹ ಕಡ್ಡಾಯವಾಗಿದೆ. ತಡ ಮಾಡಿದರೆ ಉಪ್ಪು ತನ್ನ ಸುವಾಸನೆ ಹಾಗೂ ರುಚಿಯನ್ನು ಕಳೆದುಕೊಳ್ಳುವಂತೆ ಅರ್ಜಿಗಳು ಮತ್ತು ಕಾಯ್ದೆಗಳು ಸಹ ತನ್ನ ಇರುವಿಕೆ ಕಳೆದುಕೊಳ್ಳುತ್ತದೆ ಎಂದು ಹೇಳಿದೆ.
ಪತಿಯಿಂದ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಮಾರು 52 ತಿಂಗಳು ಬಾಕಿ ಉಳಿಸಿಕೊಂಡಿದ್ದ ಕ್ರಮವನ್ನು ಪ್ರಶ್ನಿಸಿ, ಪತ್ನಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, 60 ದಿನಗಳೊಳಗೆ ತೀರ್ಮಾನಿಸಬೇಕು ಎಂದು ನಿರ್ದೇಶನ ನೀಡಿದೆ. ಅಲ್ಲದೆ, ನ್ಯಾಯದಾನ ವಿಳಂಬವಾದರೆ ಅದು ಶಾಸನದ ಆತ್ಮವನ್ನು ಕಸಿದುಕೊಂಡಂತೆ. ಅಂತಹ ವಿಳಂಬವು ಖಂಡಿತವಾಗಿಯೂ ನ್ಯಾಯವನ್ನು ನಿರಾಕರಿಸುತ್ತದೆ ಎಂದೂ ನ್ಯಾಯಪೀಠ ತಿಳಿಸಿದೆ.
ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯ ರಕ್ಷಣೆ ಕಾಯ್ದೆ, 2005ರ ಅಡಿಯಲ್ಲಿ ಮಧ್ಯಂತರ ಪರಿಹಾರಕ್ಕಾಗಿ ನೊಂದ ಮಹಿಳೆಯರು ಸಲ್ಲಿಸಿರುವ ಅರ್ಜಿಗಳನ್ನು ಬಾಕಿ ಉಳಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಇದರಿಂದ ಸಂತ್ರಸ್ತ ಮಹಿಳೆಯಲ್ಲಿ ವ್ಯಾಜ್ಯ ಮುನ್ನಡೆಸಲು ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೌಟುಂಬಿಕ ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯು ಕಾಯಿದೆಯಡಿಯಲ್ಲಿ ಜೀವನಾಂಶ, ಆಶ್ರಯ ಅಥವಾ ನಗದು ಪರಿಹಾರ ಕೋರಿ ಮ್ಯಾಜಿಸ್ಟ್ರೇಟ್‌ನ ಬಾಗಿಲು ತಟ್ಟಿದಾಗ, ಅಂತಹ ಕುಂದುಕೊರತೆಗಳನ್ನು ತಕ್ಷಣವೇ ಪರಿಹರಿಸಬೇಕು. ಈ ಕಾರಣಕ್ಕಾಗಿಯೇ ಕಾಯ್ದೆಯ ಸೆಕ್ಷನ್ 12 (5) ರ ಪ್ರಕಾರ ಅಂತಹ ಅರ್ಜಿಗಳನ್ನು 60 ದಿನಗಳಲ್ಲಿ ವಿಲೇವಾರಿ ಮಾಡಬೇಕೆಂದು ಶಾಸನವು ಆದೇಶಿಸುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಕಾಲಮಿತಿ ನಿಗದಿ :ನೊಂದ ಮಹಿಳೆ ಸಲ್ಲಿಸಿರುವ ಮಧ್ಯಂತರ ಪರಿಹಾರಕ್ಕಾಗಿ ಅರ್ಜಿಗಳನ್ನು ಪರಿಗಣಿಸಲು ಮತ್ತು ಪತಿಯಿಂದ ಆಕ್ಷೇಪಣೆಗಳನ್ನು ಸಲ್ಲಿಸಲು ವಿಚಾರಣಾ ಕೋರ್ಟ್ ಗಳಿಗೆ ಹೈಕೋರ್ಟ್ ಕಾಲಮಿತಿಯನ್ನು ನಿಗದಿಪಡಿಸಿದೆ. ವಿಚಾರಣಾ ನ್ಯಾಯಾಲಯಗಳು ಪತಿಗೆ ಆಕ್ಷೇಪಣೆ ಮತ್ತು ಆಸ್ತಿ ಮತ್ತು ಹೊಣೆಗಾರಿಕೆಗಳ ಹೇಳಿಕೆಯನ್ನು ಸಲ್ಲಿಸಲು ಕೇವಲ ನಾಲ್ಕು ವಾರಗಳ ಕಾಲಾವಕಾಶ ನೀಡಬೇಕು. ಪತಿ ನಾಲ್ಕು ವಾರಗಳಲ್ಲಿ ತನ್ನ ಹೇಳಿಕೆಗಳನ್ನು ಸಲ್ಲಿಸಲು ವಿಫಲವಾದರೆ, ವಿಚಾರಣಾ ನ್ಯಾಯಾಲಯಗಳು ಕಾನೂನಿನ ಪ್ರಕಾರ ಎಕ್ಸ್-ಪಾರ್ಟೆ ಮಧ್ಯಂತರ ಪರಿಹಾರಗಳನ್ನು ನೀಡಬೇಕು.