ಬೆಂಗಳೂರು:ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸುವ ಸಂಬಂಧ ಪೊಲೀಸ್ ಠಾಣೆಗಳಿಗೆ ಎಷ್ಟು ಶಬ್ದ ಮಾಲಿನ್ಯ ಮಾಪಕಗಳ ಅಗತ್ಯವಿದೆ ಎಂಬ ಕುರಿತು ಸೂಕ್ತ ಪ್ರಮಾಣಪತ್ರ ಸಲ್ಲಿಸದ ರಾಜ್ಯ ಪೊಲೀಸ್ ಮಹಾನಿರ್ದೇಶಕರ ವಿರುದ್ದ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯದಲ್ಲಿ ರಾಜಕೀಯ ಸಮಾವೇಶಗಳು, ಧಾರ್ಮಿಕ ಕೇಂದ್ರಗಳು, ವಾಹನಗಳಿಂದ ಶಬ್ದ ಮಾಲಿನ್ಯ ಹೆಚ್ಚುತ್ತಿದ್ದು, ಅದನ್ನು ತಡೆಗಟ್ಟಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಈ ವೇಳೆ ಸರ್ಕಾರದ ಪರ ವಕೀಲರು, ಹೈಕೋರ್ಟ್ನ ಹಿಂದಿನ ನಿರ್ದೇಶನದಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರ ಪ್ರಮಾಣಪತ್ರವನ್ನು ಪೀಠಕ್ಕೆ ಸಲ್ಲಿಸಿದರು. ಪ್ರಮಾಣ ಪತ್ರದಲ್ಲಿ ಬೆಂಗಳೂರು ನಗರ ಹೊರತುಪಡಿಸಿ ರಾಜ್ಯದ ಇತರೆಡೆ 176 ಪೊಲೀಸ್ ಠಾಣೆಗಳಿವೆ. ಅಷ್ಟೂ ಠಾಣೆಗಳಿಗೆ ಶಬ್ಧ ಮಾಲಿನ್ಯ ಅಳೆಯುವ ಮಾಪಕಗಳ ಅಗತ್ಯವಿದೆ. ಆದರೆ, ಅವುಗಳನ್ನು ಡಿಸೆಂಬರ್ ವೇಳೆಗೆ ಹಂತ ಹಂತವಾಗಿ ಖರೀದಿಸಲಾಗುವುದು ಎಂದು ತಿಳಿಸಿದರು.