ಕರ್ನಾಟಕ

karnataka

ETV Bharat / state

ಈಜಿಪುರದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಕಾರ್ಯ ವಿಳಂಬ: ಹೈಕೋರ್ಟ್ ನೋಟಿಸ್ - ETv Bharat Karnataka

ಆರ್ಥಿಕವಾಗಿ ಹಿಂದುಳಿದ ವರ್ಗಗಳ(ಇಡಬ್ಲ್ಯೂಎಸ್​) ಜನರಿಗೆ ನಗರದ ಕೋರಮಂಲಗದ ಈಜಿಪುರ ವ್ಯಾಪ್ತಿಯಲ್ಲಿನ ಉದ್ದೇಶಿತ ವಸತಿ ಸಮುಚ್ಛಯ (ಅಪಾರ್ಟ್‌ಮೆಂಟ್) ನಿರ್ಮಿಸುವುದರಲ್ಲಿ ವಿಳಂಬ ಮಾಡಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

High Court notice challenging the delay in construction of housing complex in Ejipur
ಈಜಿಪುರದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಕಾರ್ಯ ವಿಳಂಬ ಪ್ರಶ್ನಿಸಿ ಹೈಕೋರ್ಟ್ ನೋಟಿಸ್

By

Published : Nov 17, 2022, 8:30 AM IST

ಬೆಂಗಳೂರು:ಆರ್ಥಿಕವಾಗಿ ಹಿಂದುಳಿದ ವರ್ಗಗಳ (ಇಡಬ್ಲ್ಯೂಎಸ್​) ಜನರಿಗೆ ನಗರದ ಕೋರಮಂಗಲದ ಈಜಿಪುರ ವ್ಯಾಪ್ತಿಯಲ್ಲಿನ ಉದ್ದೇಶಿತ ವಸತಿ ಸಮುಚ್ಛಯ (ಅಪಾರ್ಟ್‌ಮೆಂಟ್) ನಿರ್ಮಿಸುವುದರಲ್ಲಿ ವಿಳಂಬ ಮಾಡಿರುವ ವಿಚಾರ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಈಜಿಪುರ ನಿವಾಸಿಗಳ ಸಾಮಾಜಿಕ ಕಲ್ಯಾಣ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್‌) ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಲೆ ನೇತೃತ್ವದ ವಿಭಾಗೀಯ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಬಿಬಿಎಂಪಿ, ಬಿಡಿಎ ಮತ್ತು ಗುತ್ತಿಗೆದಾರ ಕಂಪನಿಯಾದ ಮೇವರಿಕ್ ಹೋರ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿದೆ.

ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಈಜಿಪುರದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ 1,521 ಮನೆಗಳ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ನಕ್ಷೆ ಅನುಮೋದನೆಯಾದ 18 ತಿಂಗಳೊಳಗೆ ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು. ಇದಕ್ಕಾಗಿ ಕಾಮಗಾರಿಯ ಗುತ್ತಿಗೆ ಪಡೆದ ಕಂಪನಿಯಾದ ಮೇವರಿಕ್ ಹೋರ್ಡಿಂಗ್ಸ್ ಪ್ರೈ.ಲಿಗೆ ಮುಚ್ಚಳಿಕೆ ಬರೆದುಕೊಡಬೇಕು ಎಂದು 2017ರ ಮೇ 31ರಂದು ಹೈಕೋರ್ಟ್ ಆದೇಶಿಸಿತ್ತು ಎಂದರು. ಹೈಕೋರ್ಟ್ ಆದೇಶದಂತೆ ಕಾಮಗಾರಿ ಆರಂಭಿಸಿದ್ದರೂ ಈವರೆಗೂ ಪೂರ್ಣಗೊಳಿಸಿಲ್ಲ. ಹಾಗಾಗಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ನಿರ್ದೇಶಿಸಬೇಕು ಎಂದು ವಾದ ಮಂಡಿಸಿದರು. ಕಾಮಗಾರಿ ಪೂರ್ಣಗೊಳಿಸುವರೆಗೆ ವಸತಿ ಹಕ್ಕುದಾರರಿಗೆ ಮಾಸಿಕ ಬಾಡಿಗೆ ಹಣ ನೀಡಲು ಆದೇಶಿಸಬೇಕು ಎಂದು ಕೋರಿದರು.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ನಿರ್ಮಾಣ ಕಾಮಗಾರಿ ವಿಳಂಬವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ವಸತಿ ಸಮುಚ್ಛಯ ನಿರ್ಮಾಣ ವಿಚಾರದಲ್ಲಿ ಬಿಬಿಎಂಪಿ ಮತ್ತು ಮೇವರಿಕ್ ನಡುವಿನ ವಿವಾದದಿಂದ ನಿವಾಸಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು. ಮನೆಗಳಿಗಾಗಿ ನಿವಾಸಿಗಳು ಇನ್ನೂ ಎಷ್ಟು ವರ್ಷ ಕಾಯಬೇಕು ಎಂದು ಖಾರವಾಗಿ ಪ್ರಶ್ನಿಸಿತು. ನಂತರ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಎಲ್ಲ ಪ್ರತಿವಾದಿಗಳಿಗೆ ಸೂಚಿಸಿ ವಿಚಾರಣೆಯನ್ನು ಡಿ.7ಕ್ಕೆ ಮುಂದೂಡಿತು.

ಇದನ್ನೂ ಓದಿ:ಜಾತಿ ಹೆಸರಲ್ಲಿ ನಿಗಮ -ಪ್ರಾಧಿಕಾರ ರಚನೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ABOUT THE AUTHOR

...view details