ಬೆಂಗಳೂರು:ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತವರ ಕುಟುಂಬಸ್ಥರಿಗೆ ಸೇರಿದ 19 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ಸರ್ಕಾರ ಅನುಮತಿ ನೀಡಿದೆ. ಗಾಲಿ ಜನಾರ್ದನ ರೆಡ್ಡಿಗೆ ಸೇರಿದ 19 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅನುಮತಿ ನೀಡಲು ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ಶೀಘ್ರದಲ್ಲಿ ಅನುಮತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಕೇಂದ್ರೀಯ ತನಿಖಾ ದಳ(ಸಿಬಿಐ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ, 19 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಮುಟ್ಟುಗೋಲಿಗೆ ರಾಜ್ಯ ಸರ್ಕಾರ ನೀಡಿರುವ ಅನುಮತಿ ಪತ್ರವನ್ನು ಸಲ್ಲಿಸಿತ್ತು. ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ಅರ್ಜಿಯನ್ನು ಇತ್ಯರ್ಥಪಡಿಸಿ ಆದೇಶಿಸಿದೆ.
ಸಿಬಿಐ ವಿರುದ್ಧ ಹೈಕೋರ್ಟ್ ಬೇಸರ: ಗಾಲಿ ಜನಾರ್ದನ ರೆಡ್ಡಿ ಕುಟುಂಬಸ್ಥರ ಸುಮಾರು 65 ಕೋಟಿ ರೂ.ಗಳ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ಅನುಮತಿ ನೀಡಿ ಏಳು ವರ್ಷಗಳು ಕಳೆದರೂ, ತಾರ್ಕಿಕ ಅಂತ್ಯ ಕಾಣಿಸದ ಸಿಬಿಐ ವಿರುದ್ಧ ಹೈಕೋರ್ಟ್ ತೀವ್ರ ಬೇಸರ ವ್ಯಕ್ತಪಡಿಸಿತು. ಅಲ್ಲದೆ, ಸಿಬಿಐ ರಾಜ್ಯ ಸರ್ಕಾರವನ್ನು ದೂರುವ ಮೂಲಕ ಆರೋಪಿಗೆ ರಕ್ಷಣೆ ನೀಡಿದಂತಾಗುತ್ತಿದೆ. ಈಗಲಾದರೂ ಸಿಬಿಐ ನಿದ್ದೆಯಿಂದ ಎಚ್ಚರಗೊಂಡು ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎಂದು ಸೂಚನೆ ನೀಡಿದೆ.
ವಿಚಾರಣೆ ವೇಳೆ ರಾಜ್ಯ ಸರ್ಕಾರದ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್‌ಚಿನ್ನಪ್ಪ, ಈ ಹಿಂದೆ 65 ಕೋಟಿ ರೂ.ಗಳ ಅಕ್ರಮ ಆಸ್ತಿಗಳ ಮುಟ್ಟುಗೋಲಿಗೆ ನೀಡಿದ್ದ ಅನುಮತಿಗೆ ಸಂಬಂಧಿಸಿದಂತೆ ಸಿಬಿಐ ಈವರೆಗೂ ಕ್ರಮಕ್ಕೆ ಮುಂದಾಗಿಲ್ಲ. ಜೊತೆಗೆ, ಆಸ್ತಿ ಮುಟ್ಟುಗೋಲಿಗೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದರೂ, ಈವರೆಗೂ ಯಾವುದೇ ಪ್ರಗತಿ ಕಂಡಿಲ್ಲ. ಈವರೆಗೂ ಆಸ್ತಿ ಮುಟ್ಟುಗೋಲಿಗೆ ಆದೇಶ ಬಂದಿಲ್ಲ. ಆದರೂ ಸಿಬಿಐ ಅಧಿಕಾರಿಗಳು ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ ಎಂದು ವಿವರಿಸಿದರು. ಅಲ್ಲದೆ, ಸಿಬಿಐ ಅಧಿಕಾರಿಗಳು ಕ್ರಮಕ್ಕೆ ಮುಂದಾಗದ ಪರಿಣಾಮ ಆರೋಪಿತರು ತನ್ನ ಆಸ್ತಿಗಳ ಮಾರಾಟಕ್ಕೆ ಮುಂದಾಗಿದ್ದಾರೆ. ಏಳು ವರ್ಷಗಳ ಕಾಲ ಆಸ್ತಿಗಳು ಹಾಗೆಯೇ ಉಳಿಯಲು ಸಾಧ್ಯವೇ? ಎಂದು ಪ್ರಶ್ನಿಸಿದರು.
ಇದರಿಂದ ಅಸಮಾಧಾನಗೊಂಡ ನ್ಯಾಯಾಲಯ, ಯಾಕೆ ಈವರೆಗೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಪ್ರಶ್ನಿಸಿತು. ಜೊತೆಗೆ, 2015ರಲ್ಲಿ ಅರ್ಜಿ ಸಲ್ಲಿಸಿದ್ದರೂ, 2022ರಲ್ಲಿ ನಂಬರ್ ಆಗಿದೆ. ಏಕೆ ಇಷ್ಟೊಂದು ವಿಳಂಬ ಎಂದು ಪ್ರಶ್ನಿಸಿತು. ಅಲ್ಲದೆ, ಈ ಸಂಬಂಧ ತನಿಖೆಗೆ ಆದೇಶಿಸಲಾಗುವುದು ಎಂದು ಎಚ್ಚರಿಕೆ ನೀಡಿತು. ಸಿಬಿಐನ ಈ ನಡೆ ಆಘಾತಕ್ಕೆ ಕಾರಣವಾಗಿದೆ. ಎಲ್ಲ ಪ್ರಕರಣಗಳಲ್ಲಿ ಇದೇ ರೀತಿಯಲ್ಲಿಯೇ ಆಗಲಿದೆಯೇ? ಇಲ್ಲವೇ ಈ ಪ್ರಕರಣದಲ್ಲಿ ಮಾತ್ರ ಈ ರೀತಿಯಾಗಿದೆಯೇ ಎಂದು ಪ್ರಶ್ನಿಸಿತು. ಜೊತೆಗೆ, ಇದು ಅತ್ಯಂತ ಅಸಮಂಜಸ ನಡೆಯಾಗಿದೆ. ಇದರ ಹಿಂದಿನ ಉದ್ದೇಶ ಏನು ಎನ್ನುವುದು ಗೊತ್ತಾಗುತ್ತಿಲ್ಲ ಎಂದು ನ್ಯಾಯಪೀಠ ಬೇಸರ ವ್ಯಕ್ತಪಡಿಸಿತು.