ಬೆಂಗಳೂರು:ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಆಗದೆ ಇರುವ ಬಿಸಿ ಕಾರಾಗೃಹದಲ್ಲಿನ ಜೈಲು ಹಕ್ಕಿಗಳಿಗೂ ಕೂಡ ತಟ್ಟಿದೆ. ಸನ್ನಡತೆ ಆಧಾರದ ಮೇಲೆ ಆ. 15ರಂದು ಜೈಲುವಾಸದಿಂದ ಹೊರಬರಬೇಕಿದ್ದ ಸುಮಾರು 72ಕ್ಕೂ ಹೆಚ್ಚು ಕೈದಿಗಳಿಗೆ ಬಿಡುಗಡೆ ಭಾಗ್ಯವಿಲ್ಲದಂತಾಗಿದೆ.
ಸಾಮಾನ್ಯವಾಗಿ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವ ಮತ್ತು ಜನವರಿ 26ರ ಗಣರಾಜ್ಯೋತ್ಷವ ದಿನದಂದು ಸನ್ನಡತೆ ಹಾಗೂ ಮನಪರಿವರ್ತನೆಗೊಂಡ ಕೈದಿಗಳನ್ನ ಶಿಕ್ಷೆಯ ಅವಧಿಗೆ ಮುನ್ನವೇ ಬಿಡುಗಡೆ ಮಾಡಲಾಗುತ್ತದೆ. ಸಚಿವ ಸಂಪುಟ ಶಿಫಾರಸು ಹಾಗೂ ರಾಜ್ಯಪಾಲರ ಅನುಮತಿಯಂತೆ ಕೈದಿಗಳ ಬಂಧ ಮುಕ್ತಗೊಳಿಸುವ ಪರಿಪಾಠ ಬೆಳೆದುಬಂದಿದೆ. ಆದರೆ ರಾಜ್ಯದಲ್ಲಿ ರಾಜಕೀಯ ಅಸ್ಥಿರತೆಯಿಂದ ಸರ್ಕಾರದ ಬದಲಾವಣೆ ಹಾಗೂ ಸಚಿವ ಸಂಪುಟ ವಿಸ್ತರಣೆ ಆಗದೇ ಇರುವುದರಿಂದ ಕೈದಿಗಳ ಬಿಡುಗಡೆ ಬಗ್ಗೆ ಆಡಳಿತ ಸರ್ಕಾರ ಹೆಚ್ಚು ತಲೆಕೆಡಿಸಿಕೊಂಡಿಲ್ಲ.
ಸ್ವಾತಂತ್ರ್ಯ ದಿನದಂದು ಸನ್ನಡತೆ ಕೈದಿಗಳ ಬಿಡುಗಡೆಗೆ ಜೂನ್-ಜಲೈ ತಿಂಗಳಿನಿಂದಲೇ ಸಂಬಂಧಪಟ್ಟ ಪ್ರಕ್ರಿಯೆ ಆರಂಭವಾಗುತ್ತದೆ. ಜುಲೈ ತಿಂಗಳಲ್ಲಿನ ರಾಜಕೀಯ ಬದಲಾವಣೆಯಿಂದ ಸಮರ್ಪಕವಾಗಿ ಸಚಿವ ಸಂಪುಟ ಸಭೆ ನಡೆಯದೆ, ಹೊಸದಾಗಿ ಆಡಳಿತಕ್ಕೆ ಬಂದ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸಹ ಕೈದಿಗಳ ಬಿಡುಗಡೆ ಕುರಿತು ಇದುವರೆಗೆ ಹೆಚ್ಚಿನ ಗಮನಹರಿಸಿಲ್ಲ.
ಬಂಧಿಖಾನೆ ಮತ್ತು ಗೃಹ ರಕ್ಷಕ ಇಲಾಖೆಯ ಬಿಡುಗಡೆಗೆ ಅರ್ಹತೆ ಪಡೆದಿರುವ ಕೈದಿಗಳ ಪಟ್ಟಿಯನ್ನ ಸಿದ್ಧಪಡಿಸಿ ಇಟ್ಟುಕೊಂಡಿದೆ. ಇದಕ್ಕೆ ಸಚಿವ ಸಂಪುಟದ ಅನುಮೋದನೆಯ ಅಗತ್ಯತೆ ಇದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 15 ದಿನಗಳ ಮೇಲಾದರೂ ಕೂಡ ಸಚಿವ ಸಂಪುಟ ವಿಸ್ತರಣೆ ಆಗದೇ ಇರುವುದರಿಂದ ಕೈದಿಗಳ ಬಿಡುಗಡೆ ಕಡತ ಸಂಪುಟ ಸಭೆಯ ಅನುಮೋದನೆಗೆ ಬರಲು ಸಾಧ್ಯವಾಗಿಲ್ಲ. ಸಂಪುಟದ ಸಮ್ಮತಿ ಸಿಗದೇ ಇರುವುದರಿಂದ ರಾಜಭವನಕ್ಕೂ ಕೈದಿಗಳ ಪಟ್ಟಿಯನ್ನ ಇಲಾಖೆ ಕಳಿಸಿಲ್ಲ. ಹಾಗಾಗಿ ಸ್ವಾತಂತ್ರ್ಯೋತ್ಸವ ದಿನದಂದು ಸನ್ನಡತೆಯುಳ್ಳ ಕೈದಿಗಳಿಗೆ ಅಕ್ಷರಶಃ ಸ್ವಾತಂತ್ರ್ಯ ಇಲ್ಲವಾದಂತಾಗಿದೆ.