ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಸೋಲಿನ ಆಘಾತದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಇನ್ನೂ ಹೊರಬರಲು ಸಾಧ್ಯವಾಗಿಲ್ಲ. ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ವಾರಗಳಾಗುತ್ತಿದೆ. ಹೀಗಿದ್ರೂ ಪಕ್ಷದ ಮುಖಂಡರಲ್ಲಿ ಸೋಲಿನ ಛಾಯೆ ಮರೆಯಾಗಿಲ್ಲ.
ಚುನಾವಣೆಯಲ್ಲಿ ಆಡಳಿತ ಪಕ್ಷವಾಗಿದ್ದ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಹಾಗೂ 8 ಜನ ಸಚಿವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆದಿದೆ. ವಿಧಾನಸಭೆ ಅಧಿವೇಶನದಲ್ಲಿ ಶಾಸಕರ ಪ್ರಮಾಣ ವಚನ ಸ್ವೀಕಾರ ಪೂರ್ಣಗೊಂಡಿದೆ. ಆದರೆ, ಬಿಜೆಪಿ ಇನ್ನೂ ಸೋಲಿನ ಗುಂಗಿನಲ್ಲಿಯೇ ಇದೆ ಎನ್ನಲಾಗುತ್ತಿದೆ.
ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎಂಬ ಅದಮ್ಯ ಆತ್ಮವಿಶ್ವಾಸದಲ್ಲಿದ್ದ ರಾಜ್ಯ ಬಿಜೆಪಿ ಮುಖಂಡರು ಮತ್ತು ಪಕ್ಷದ ಹೈಕಮಾಂಡ್ಗೆ ಫಲಿತಾಂಶದಿಂದ ಭ್ರಮನಿರಸನವಾಗಿದೆ ಎಂದು ಹೇಳಲಾಗುತ್ತಿದೆ. ದೆಹಲಿ ಬಿಜೆಪಿ ವರಿಷ್ಠರುಗಳೇ ವಿಧಾನಸಭೆ ಚುನಾವಣೆಯ ಜವಾಬ್ದಾರಿ ವಹಿಸಿಕೊಂಡಿದ್ದರಿಂದ ಯಾರ ಮೇಲೂ ಬೆರಳು ತೋರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕರ್ನಾಟಕದ ವಿಧಾನಸಭೆ ಚುನಾವಣೆಯ ಎಲ್ಲ ತಂತ್ರಗಾರಿಕೆಗಳನ್ನು ರೂಪಿಸಿದ್ದರು. ವ್ಯಾಪಕವಾಗಿ ಚುನಾವಣೆ ಪ್ರಚಾರ ಸಹ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರಂತೂ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಿಂಚಿನಂತೆ ಸಂಚರಿಸಿ ಚುನಾವಣಾ ರ‍್ಯಾಲಿ, ರೋಡ್ ಶೋಗಳನ್ನು ನಡೆಸಿ ಗಮನ ಸೆಳೆದಿದ್ದರು.
ಫಲಿತಾಂಶದ ಮೇಲೆ ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದ ಬಿಜೆಪಿ ರಾಜ್ಯ ಮುಖಂಡರಿಗೆ ಅದರಲ್ಲೂ ದೆಹಲಿ ನಾಯಕರಲ್ಲಿ ಪಕ್ಷದ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲವೆಂದು ಹೇಳಲಾಗುತ್ತಿದೆ. ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶದ ಆಧಾರದ ಮೇಲೆ ಲೋಕಸಭೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಲೆಕ್ಕಾಚಾರ ಹಾಕಿದ್ದ ಬಿಜೆಪಿಗೆ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವು ಎಲ್ಲ ರಾಜಕೀಯ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದೆ.