ಬೆಂಗಳೂರು: ಅತಿಸಾರ ಬೇದಿ ನಿಯಂತ್ರಿಸಿ ಮಕ್ಕಳ ಮರಣ ತಪ್ಪಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯಿಂದ ಜಾಗೃತಿ ಅಭಿಯಾನ ಆರಂಭಿಸಿದೆ.
ಆರೋಗ್ಯ ಇಲಾಖೆಯಿಂದ ಜಾಗೃತಿ ಅಭಿಯಾನ ಭಾರತದಲ್ಲಿ 0-5 ವರ್ಷದ ಮಕ್ಕಳ ಸಾವಿನ ಪ್ರಮಾಣದಲ್ಲಿ ಶೇ.10 ರಷ್ಟು ಮಕ್ಕಳ ಮರಣಕ್ಕೆ ಅತಿಸಾರ ಬೇದಿಯು ಕಾರಣವಾಗಿದೆ. ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಅತಿ ಸಾರಬೇದಿಯಿಂದ ಬಳಲುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಈ ರೋಗದ ತೀವ್ರತೆ ಹೆಚ್ಚಾಗಿರುವ ಕಾರಣ ಆರೋಗ್ಯ ಇಲಾಖೆಯಿಂದ ಈ ಜಾಗೃತಿ ಅಭಿಯಾನವನ್ನು ಆಯೋಜಿಸಲಾಗಿದೆ.
ದಿನದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಬಾರಿ ಹಾಗೂ ನೀರಾಗಿ ಮಲವಿಸರ್ಜನೆ ಮಾಡುವುದನ್ನು ಅತಿಸಾರ ಬೇದಿಯೆಂದು ಗುರುತಿಸಲಾಗುತ್ತೆ. ಇದರಿಂದಾಗುತ್ತಿರುವ ಮರಣದ ಸಂಖ್ಯೆ ತಡೆಗಟ್ಟುವ ನಿಟ್ಟಿನಲ್ಲಿ 2014 ರಿಂದ 2018 ಸಾಲಿನಲ್ಲಿ ಅತಿಸಾರಬೇದಿ ನಿಯಂತ್ರಣ ಪಾಕ್ಷಿಕವನ್ನು ಆಚರಿಸಲಾಗಿತ್ತು. ಈ ವರ್ಷವೂ ಜೂನ್ 3 ರಿಂದ 17ರವರೆಗೆ ರಾಜ್ಯಾದ್ಯಂತ ಅತಿಸಾರಬೇದಿ ನಿಯಂತ್ರಣ ಪಾಕ್ಷಿಕವನ್ನು "ತೀವ್ರತರ ಅತಿಸಾರಬೇದಿಯಿಂದ ಶೂನ್ಯಮಕ್ಕಳ ಮರಣ" ಎಂಬ ಧೈಯವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ಶಾಯಿನಸ್ ತಬ್ಸುಂ ತಿಳಿಸಿದರು.
ಇನ್ನು ಶುದ್ಧ ಕುಡಿಯುವ ನೀರು, ಕೈಗಳ ಶುಚಿತ್ವ, ಶೌಚಾಲಯದ ಉಪಯೋಗ, ಪರಿಸರ ನೈರ್ಮಲ್ಯ, ಲಸಿಕೆಗಳನ್ನು ಹಾಕಿಸುವುದು, ಪೌಷ್ಟಿಕ ಆಹಾರ ಹಾಗೂ ಸರಿಯಾಗಿ ಎದೆಹಾಲುಣಿಸುವುದರಿಂದ ಮಕ್ಕಳಲ್ಲಿ ಅತಿಸಾರಬೇದಿಯನ್ನು ತಡೆಗಟ್ಟಬಹುದು ಎಂದು ಡಾ. ಶಾಯಿನಸ್ ತಬ್ಸುಂ ವಿವರಿಸಿದರು.
ಅತಿಸಾರಬೇದಿ ನಿಯಂತ್ರಣದ ಬಗ್ಗೆ ಆರೋಗ್ಯ ಇಲಾಖೆ ಅರಿವು ಮೂಡಿಸುತ್ತಿದ್ದು, ಓ.ಆರ್.ಎಸ್ ಮತ್ತು ಝಿಂಕ್ ಕೆಂದ್ರಗಳನ್ನು ಸ್ಥಾಪಿಸಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಓ,ಆರ್,ಎಸ್, ಪೊಟ್ಟಣಗಳನ್ನು ನೀಡಿ ಸಾರ್ವಜನಿಕರಿಗೆ ಶುಚಿತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.