ಬೆಂಗಳೂರು:ಕನಕಪುರದಲ್ಲಿ ತಲೆ ಎತ್ತಲಿದೆ ದೆಹಲಿ ಏಮ್ಸ್ ಆಸ್ಪತ್ರೆ ಮಾದರಿಯ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಬೃಹತ್ ಆಸ್ಪತ್ರೆ. ಅಂದಾಜು 600 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಆಸ್ಪತ್ರೆ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ದೆಹಲಿಯ ಏಮ್ಸ್ ಆಸ್ಪತ್ರೆ ದೇಶದಲ್ಲೇ ಪ್ರಸಿದ್ದವಾದ ಆಸ್ಪತ್ರೆಯಾಗಿದೆ. ಏಮ್ಸ್ ದರ್ಜೆ ಆಸ್ಪತ್ರೆಯನ್ನು ನಮ್ಮ ರಾಜ್ಯದಲ್ಲೂ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ಕನಕಪುರದಲ್ಲಿ ಈ ಪ್ರತಿಷ್ಠಿತ ಆಸ್ಪತ್ರೆ ನಿರ್ಮಿಸುವ ಮೂಲಕ ಐಟಿ ಹಬ್ ಎನ್ನಿಸಿಕೊಂಡಿರುವ ಕರ್ನಾಟಕಕ್ಕೆ ಮತ್ತೊಂದು ಖ್ಯಾತಿ ದಕ್ಕಿಸಿಕೊಡಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಸ್ತಾವನೆ ಸಿದ್ದಗೊಳಿಸುತ್ತಿದೆ. ಸದ್ಯದಲ್ಲೇ ವೈದ್ಯಕೀಯ ಶಿಕ್ಷಣ ಸಚಿವ ಇ. ತುಕಾರಾಂ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದಿಟ್ಟು ಈ ಆಸ್ಪತ್ರೆ ನಿರ್ಮಾಣಕ್ಕೆ ಅಂಗೀಕಾರ ಪಡೆಯಲಿದ್ದಾರೆ. ಅದೇ ರೀತಿ ಮೈಸೂರು, ಮಂಡ್ಯ, ಹುಬ್ಬಳ್ಳಿ ಹಾಗೂ ಬಳ್ಳಾರಿಯ ಜಿಲ್ಲಾ ಆಸ್ಪತ್ರೆಗಳಲ್ಲಿ ತಲಾ 15 ಕೋಟಿ ರೂಪಾಯಿ ವೆಚ್ಚದ ಅತ್ಯಾಧುನಿಕ ಆಪರೇಷನ್ ಥಿಯೇಟರ್ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಆರಂಭಿಕ ಹಂತದ ಆಪರೇಷನ್ ಥಿಯೇಟರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಿರ್ಮಿಸಲಾಗುತ್ತಿದೆ. ಈ ತಿಂಗಳ ಅಂತ್ಯದ ವೇಳೆಗೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ. ಆನಂತರ ಮಂಡ್ಯ, ಮೈಸೂರು, ಹುಬ್ಬಳ್ಳಿ ಹಾಗೂ ಬಳ್ಳಾರಿ ಜಿಲ್ಲಾ ಆಸ್ಪತ್ರೆಗಳಲ್ಲಿ ಇಂತಹ ಅತ್ಯಾಧುನಿಕ ಶಸ್ತ್ರ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ನಂತರದ ದಿನಗಳಲ್ಲಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಇಂತಹ ಶಸ್ತ್ರ ಚಿಕಿತ್ಸಾ ಘಟಕವನ್ನು ಪ್ರಾರಂಭಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇದರ ವಿಶೇಷತೆಗಳೇನು ಎಂದು ನೋಡುವುದಾದ್ರೆ?
ಪ್ರಸ್ತುತ ಇರುವ ಆಪರೇಷನ್ ಥಿಯೇಟರ್ಗಳಲ್ಲಿ ನಾಲ್ಕು ಅಥವಾ ಐದು ಶಸ್ತ್ರ ಚಿಕಿತ್ಸೆಗಳನ್ನು ಒಟ್ಟಿಗೆ ಮಾಡಬಹುದು. ಆದರೆ, ನಿರ್ಮಾಣವಾಗಲಿರುವ ಅತ್ಯಾಧುನಿಕ ಆಪರೇಷನ್ ಥಿಯೇಟರ್ಗಳಲ್ಲಿ ಹದಿನೈದರಿಂದ ಇಪ್ಪತ್ತು ಶಸ್ತ್ರ ಚಿಕಿತ್ಸೆಗಳನ್ನು ನಡೆಸಬಹುದು. ಅನಸ್ತೇಶಿಯಾ ವಿಭಾಗ, ವಿಶೇಷ ಏರ್ ಕಂಡೀಷನ್ ವ್ಯವಸ್ಥೆ, ಶಸ್ತ್ರ ಚಿಕಿತ್ಸೆಗಳನ್ನು ನಡೆಸಲು ಬೇಕಾಗುವ ವಿಶಾಲ ಜಾಗದ ವ್ಯವಸ್ಥೆ ವ್ಯವಸ್ಥಿತವಾಗಿರುತ್ತದೆ. ಜೊತೆಗೆ ಹೆಚ್ಚುವರಿ ವೈದ್ಯರ ತಂಡಗಳನ್ನು ಸಹ ಒದಗಿಸಲಾಗುತ್ತದೆ.
ಇನ್ನು, ಮೆಡಿಕಲ್ ಕಾಲೇಜುಗಳಿರುವ ಜಿಲ್ಲೆಗಳ ಮುಖ್ಯ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನು 400 ರಿಂದ 650ಕ್ಕೆ ಹೆಚ್ಚಳ ಮಾಡಲು ತೀರ್ಮಾನಿಸಲಾಗಿದೆಯಂತೆ. ಈಗಾಗಲೇ ನಾಲ್ಕು ಜಿಲ್ಲಾಸ್ಪತ್ರೆಗಳಲ್ಲಿ ಹಾಸಿಗೆ ಹೆಚ್ಚಳದ ಕೆಲಸವೂ ನಡೆದಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಉಳಿದ ಮೆಡಿಕಲ್ ಆಸ್ಪತ್ರೆಗಳಿಗೆ ಹೊಂದಿಕೊಂಡಿರುವ ಜಿಲ್ಲಾ ಆಸ್ಪತ್ರೆಗಳಿಗೂ ಈ ಸೌಲಭ್ಯ ವಿಸ್ತರಿಸಲು ತೀರ್ಮಾನಿಸಲಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆ ಘಟಕವನ್ನು ಮೈಸೂರಿನಲ್ಲಿ ಆರಂಭಿಸಿದ ರೀತಿಯಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಘಟಕಗಳನ್ನು ಮೈಸೂರು, ಹುಬ್ಬಳ್ಳಿಯಲ್ಲಿ ಆರಂಭಿಸಲಾಗಿದೆ. ಅದೇ ರೀತಿ, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲೂ ಕಿದ್ವಾಯಿ ಆಸ್ಪತ್ರೆ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಇನ್ಫೋಸಿಸ್ ನೆರವಿನೊಂದಿಗೆ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಕಟ್ಟಡವನ್ನು ವಿಸ್ತರಿಸಲಾಗಿದೆ. ಆದರೂ, ಕ್ಯಾನ್ಸರ್ ರೋಗಿಗಳ ಪ್ರಮಾಣ ಹೆಚ್ಚುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆ ಕಿದ್ವಾಯಿ ಆಸ್ಪತ್ರೆಯ ಘಟಕಗಳನ್ನು ತೆರೆದು ರೋಗಿಗಳಿಗೆ ಅನುಕೂಲ ಮಾಡಿಕೊಡುವುದು ಸರ್ಕಾರದ ಉದ್ದೇಶ ಎಂದು ತಿಳಿಸಲಾಗಿದೆ.