ಬೆಂಗಳೂರು:ಶೀಘ್ರದಲ್ಲೇ ಪದವಿ, ಎಂಜಿನಿಯರಿಂಗ್ ವಿಭಾಗದ ಪರೀಕ್ಷಾ ದಿನಾಂಕವನ್ನು ಪ್ರಕಟ ಮಾಡುತ್ತೇವೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಇಂದು ಈ ಸಂಬಂಧ ಅಧಿಕಾರಿಗಳ ಸಭೆ ಮಾಡುತ್ತಿದ್ದೇನೆ. ಆಫ್ಲೈನ್ ಕ್ಲಾಸ್, ಪರೀಕ್ಷೆ ದಿನಾಂಕ ಇದೆಲ್ಲದರ ಬಗ್ಗೆ ಇವತ್ತಿನ ಸಭೆಯಲ್ಲಿ ತೀರ್ಮಾನಿಸುತ್ತೇವೆ. ಸಭೆ ಬಳಿಕ ಸಿಎಂ ಜೊತೆ ಚರ್ಚೆ ಮಾಡಿ ಪರೀಕ್ಷಾ ದಿನಾಂಕ ಪ್ರಕಟಿಸುತ್ತೇವೆ ಎಂದರು.
ಆನ್ಲೈನ್ನಲ್ಲಿ ಕಾಲೇಜು ಮಾನ್ಯತೆ:ಪದವಿ ಕಾಲೇಜುಗಳ ಮಾನ್ಯತೆ ಇನ್ಮುಂದೆ ಆನ್ಲೈನ್ನಲ್ಲಿ ಸಿಗಲಿದೆ. ವಿಶ್ವವಿದ್ಯಾಲಯಗಳ ಕಾಲೇಜುಗಳಿಗೆ ಮಾನ್ಯತೆ ಇನ್ಮುಂದೆ ಆನ್ಲೈನ್ನಲ್ಲಿ ನೀಡಲು ನಿರ್ಧರಿಸಲಾಗಿದೆ. ಈ ಸಂಬಂಧ ನೂತನ ವೆಬ್ಸೈಟ್ಗೆ ಡಿಸಿಎಂ ಅಶ್ವತ್ಥ್ ನಾರಾಯಣ ಚಾಲನೆ ನೀಡಿದ್ರು.
ಮಾನ್ಯತೆ, ಆಡಳಿತಾತ್ಮಕ ವಿಷಯ ಸೇರಿ ಎಲ್ಲಾ ಫೈಲ್ಗಳನ್ನು ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಆನ್‌ಲೈನ್ ಮೂಲಕವೇ ಎಲ್ಲಾ ತಪಾಸಣೆ ಮಾಡಿ ಅದನ್ನು ಅಪ್ರೂವ್ ಮಾಡಲಾಗುತ್ತದೆ. ಕಚೇರಿಗೆ ಅಲೆಯುವ ಕಾಟ ತಪ್ಪಿಸಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ವಿವಿಗಳಲ್ಲಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಮಾನ್ಯತೆ ಕೊಡೋದು ಅತ್ಯಂತ ಪ್ರಮುಖ ವಿಚಾರ. ಕೋರ್ಸ್ ಪ್ರಾರಂಭ, ಕಾಲೇಜು ಮಾನ್ಯತೆ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳ ಮಾಡೋದಕ್ಕೆ ಮಾನ್ಯತೆ ಕೊಡಬೇಕು. ಹಿಂದಿನ ಪದ್ಧತಿಯಲ್ಲಿ ನಿಯಮ ಪಾಲನೆ ಆಗಿದೆಯಾ? ಕಾನೂನು ಪಾಲನೆ ಆಗಿದೆಯಾ? ಅಂತ ನೋಡಬೇಕಿತ್ತು. ಈಗ ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆನ್‌ಲೈನ್ ಮೂಲಕ ಕೊಡುತ್ತಿದ್ದೇವೆ. ಮಾನ್ಯತೆಗೆ ಎಲ್ಲಾ ದಾಖಲಾತಿಗಳನ್ನ ಆನ್ಲೈನ್ನಲ್ಲಿ ಸಲ್ಲಿಸಬೇಕು ಎಂದು ಡಿಸಿಎಂ ತಿಳಿಸಿದರು.
ಪಾರದರ್ಶಕತೆ, ಉತ್ತಮ ಸಂವಹನ, ಕಾರ್ಯಗಳಿಗೆ ವೇಗ ನೀಡಲು ಆನ್‌ಲೈನ್ ವ್ಯವಸ್ಥೆ ಜಾರಿಗೆ ತರುತ್ತಿದ್ದೇವೆ. ಇದಲ್ಲದೆ ಇ- ಆಫೀಸ್ ಜಾರಿಗೆ ತಂದಿದ್ದೇವೆ. ಜುಲೈ 15ರಿಂದ ವಿವಿಗಳು ಇ-ಆಫೀಸ್ ಮೂಲಕ ಉನ್ನತ ಶಿಕ್ಷಣ ಇಲಾಖೆ ಜೊತೆ ವ್ಯವಹಾರ ಮಾಡಬೇಕು. ಈಗಾಗಲೇ ಇದಕ್ಕೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಮ್ಯಾನ್ಯುವಲ್ನಲ್ಲಿ ಯಾವುದೇ ಕೆಲಸ ಮಾಡಲಾಗುವುದಿಲ್ಲ. ಎಲ್ಲವೂ ಆನ್‌ಲೈನ್, ಇ- ಆಫೀಸ್ ಮೂಲಕ ನಡೆಯುತ್ತದೆ ಎಂದು ತಿಳಿಸಿದರು.