ಬೆಂಗಳೂರು :ಸುಮಾರು ಎಂಟು ತಾಸು ಪ್ರಯಾಣದಲ್ಲಿ ಕಾರಿನಲ್ಲಿ ಹವಾನಿಯಂತ್ರಣ(ಎಸಿ) ಕೆಲಸ ಮಾಡದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ 15,000 ರೂಪಾಯಿ ಪರಿಹಾರ ನೀಡುವಂತೆ ಕ್ಯಾಬ್ ಅಗ್ರಿಗೇಟರ್ ಓಲಾಗೆ ಬೆಂಗಳೂರಿನ ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ. ಪ್ರಕರಣ ಸಂಬಂಧಿಸಿದಂತೆ ವಿಕಾಸ್ ಭೂಷಣ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಎಂ. ಶೋಭಾ, ಸದಸ್ಯರಾದ ಸುಮಾ ಅನಿಲ್ ಕುಮಾರ್ ಮತ್ತು ಎನ್.ಜ್ಯೋತಿ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಗ್ರಾಹಕರಿಗೆ ನೀಡಿದ ಭರವಸೆಯಂತೆ ಅವರಿಗೆ ಸೇವೆ ಒದಗಿಸುವುದು ಅಗ್ರಿಗೇಟರ್ (ಓಲಾ) ಸಂಸ್ಥೆಯ ಕರ್ತವ್ಯವಾಗಿದೆ. ಎಂಟು ಗಂಟೆಗಳ ಪ್ರಯಾಣದ ಅವಧಿಗೆ ಎಸಿ ಸೇವೆ ಒದಗಿಸದೆ ದೂರುದಾರರು ತಮ್ಮ ಪ್ರಯಾಣದಲ್ಲಿ ಅನಾನುಕೂಲ ಮತ್ತು ಮಾನಸಿಕ ಯಾತನೆ ಅನುಭವಿಸುವಂತೆ ಮಾಡಲಾಗಿದೆ. ಆದ್ದರಿಂದ ಓಲಾ ಕರ್ತವ್ಯ ಲೋಪ ಎಸಗಿದೆ ಎಂದು ಅಭಿಪ್ರಾಯ ಪಟ್ಟಿರುವ ಪೀಠ ದಂಡ ವಿಧಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ದೂರುದಾರ ವಿಕಾಸ್ ಭೂಷಣ್ ಅಕ್ಟೋಬರ್ 2021ರಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಓಲಾ ಅಪ್ಲಿಕೇಶನ್ ಮೂಲಕ ಕ್ಯಾಬ್ ಬಾಡಿಗೆಗೆ ಪಡೆದು 80 ಕಿ.ಮೀ ಅಥವಾ ಎಂಟು ಗಂಟೆಗಳ ಹವಾನಿಯಂತ್ರಿತ ವ್ಯವಸ್ಥೆಯೊಂದಿಗೆ ಪ್ರಯಾಣದ ಆಯ್ಕೆ ಮಾಡಿಕೊಂಡಿದ್ದರು. ಆದರೆ, 8 ಗಂಟೆಗಳ ಪ್ರಯಾಣದ ಅವಧಿಯಲ್ಲಿ ಎಸಿ ಕಾರ್ಯನಿರ್ವಹಿಸಿರಲಿಲ್ಲ. ಪ್ರಯಾಣದ ವೇಳೆ ಎದುರಾಗುವ ಸಮಸ್ಯೆಗಳನ್ನು ನಿವಾರಿಸಲು ಯಾವುದೇ ವ್ಯವಸ್ಥೆ ಇಲ್ಲ. ಜೊತೆಗೆ ಪ್ರಯಾಣ ರದ್ದುಗೊಳಿಸಿದರೆ ಬುಕಿಂಗ್ ಮೊತ್ತವೂ ರದ್ದಾಗುತ್ತಿತ್ತು. ಓಲಾ ಗ್ರಾಹಕ ಸೇವಾ ಕೇಂದ್ರವನ್ನು ಅದೇ ದಿನ ಸಂಪರ್ಕಿಸಿದರೂ ಮೊತ್ತ ಹಿಂಪಡೆಯಲು ಸಾಧ್ಯವಾಗಿರಲಿಲ್ಲ. ಜತೆಗೆ, ಇಮೇಲ್ ಮೂಲಕ ಪತ್ರ ಬರೆಯಲಾಗಿತ್ತು. ಇದಾದ ಬಳಿಕ ಕಸ್ಟಮರ್ ಕೇರ್ ಸರ್ವಿಸ್ನೊಂದಿಗೆ ಕರೆ ಮಾಡಿ ಸಂಪರ್ಕಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ವಿವರಿಸಿದ್ದರು.