ರಕ್ಷಣಾ ಮತ್ತು ಬಾಹ್ಯಾಕಾಶ ತಜ್ಞ ರಾಘವೇಂದ್ರ ಕುಲಕರ್ಣಿ ಬೆಂಗಳೂರು : ಚಂದ್ರಯಾನ-3 ನೌಕೆಯನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸುವ ಮೂಲಕ ಭಾರತ ಹೆಚ್ಚಿನ ಸಂಶೋಧನೆ ಮಾಡಲು ಕೈಗೊಂಡಿರುವ ಮಹತ್ತರ ಯೋಜನೆ. ಇದರಿಂದ ವೈಜ್ಞಾನಿಕ ಸಂಶೋಧನೆ ಮತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಹೆಚ್ಚಿನ ಬೆಳವಣಿಗೆ ಸಾಧ್ಯವಾಗಲಿದೆ. ನಾಳೆ ಸಂಜೆ ನಡೆಯುವ ಲ್ಯಾಂಡಿಂಗ್ ಕುರಿತ ಕೌತುಕ ನಮ್ಮ ದೇಶದ ಜನರಿಗೆ ಮಾತ್ರವಲ್ಲದೇ ಇಡೀ ಮನುಕುಲಕ್ಕಿದೆ ಎಂದು ರಕ್ಷಣಾ ಮತ್ತು ಬಾಹ್ಯಾಕಾಶ ತಜ್ಞ ರಾಘವೇಂದ್ರ ಕುಲಕರ್ಣಿ ತಿಳಿಸಿದ್ದಾರೆ.
ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡುತ್ತಾ, ವಿಕ್ರಂ ಲ್ಯಾಂಡರ್, ಪ್ರಜ್ಞಾನ್ ರೋವರ್ ಯಶಸ್ವಿಯಾಗಿ ಚಂದ್ರನ ಮೇಲ್ಮೈಯಲ್ಲಿ ಇಳಿದರೆ ಇಸ್ರೋದ ಹೆಸರು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಜರಾಮರವಾಗಲಿದೆ. ಸೋವಿಯತ್ ಯೂನಿಯನ್, ಅಮೆರಿಕ ಮತ್ತು ಚೀನಾ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಸಾಲಿನಲ್ಲಿ ಭಾರತ ಕೂಡ ನಿಲ್ಲಲಿದೆ ಎಂದು ಅಭಿಪ್ರಾಯಪಟ್ಟರು.
ರಷ್ಯಾದ ಲೂನಾ 25 ಮಿಷನ್ ಮತ್ತು ಇಸ್ರೋದ ಚಂದ್ರಯಾನ 3ಕ್ಕೆ ಯಾವುದೇ ನೇರವಾದ ಸಂಬಂಧವಿಲ್ಲ. ಆ ದೇಶದ ಬಾಹ್ಯಾಕಾಶ ಸಂಶೋಧನೆಗಳು ಹಲವು ಕಾರಣಗಳಿಂದ ವಿಳಂಬವಾಗುತ್ತಾ ಬಂದು ಈಗ ಅವರು ಕೂಡ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಲು ಪ್ರಯತ್ನಪಟ್ಟಿದ್ದು ಕಾಕತಾಳೀಯವಷ್ಟೇ. ಆದರೆ, ಭಾರತ ನಿಧಾನವಾದರೂ ಬಾಹ್ಯಾಕಾಶ ಸಂಶೋಧನೆಗಳನ್ನು ಕಾಲಕಾಲಕ್ಕೆ ಕೈಗೊಳ್ಳುತ್ತಾ ಬಂದು ಚಂದ್ರನ ಮೇಲ್ಮೈ ವಿಶ್ಲೇಷಣೆಗೆ ಹಲವು ಯೋಜನೆಗಳನ್ನು ಮೊದಲಿನಿಂದಲೂ ರೂಪಿಸಿಕೊಳ್ಳುತ್ತಾ ಬಂದಿದೆ ಎಂದರು.
ಚಂದ್ರಯಾನ-3 ಕುರಿತು ರಕ್ಷಣಾ ಮತ್ತು ಬಾಹ್ಯಾಕಾಶ ತಜ್ಞ ರಾಘವೇಂದ್ರ ಕುಲಕರ್ಣಿ ಮಾಹಿತಿ ನೀಡಿದರು. ಚಂದ್ರನ ದಿನ ಪ್ರಾರಂಭವಾಗುವ ವೇಳೆಗೆ ಸರಿಯಾಗಿ ಆಗಸ್ಟ್ 23 ಸಂಜೆ 6 ಗಂಟೆ 4 ನಿಮಿಷಕ್ಕೆ ಲ್ಯಾಂಡರ್ ಇಳಿಸಲು ಮುಹೂರ್ತ ನಿಗದಿಪಡಿಸಲಾಗಿದೆ. ಅಲ್ಲಿ ಸೂರ್ಯೋದಯದಿಂದ ಪ್ರಾರಂಭವಾಗುವ ಸೌರಶಕ್ತಿಯನ್ನು ಬಳಸಿಕೊಂಡು ಲ್ಯಾಂಡರ್‌ನಿಂದ ಹೊರಬರುವ ರೋವರ್ ಕಾರ್ಯಾಚರಣೆ ನಡೆಸುವುದೇ ಈ ಯೋಜನೆ. ಆದರೆ ಅಲ್ಲಿನ ವಾತಾವರಣದಲ್ಲಿನ ದಿಢೀರ್ ಬದಲಾವಣೆ ಮತ್ತು ಇಳಿಸುವ ಸ್ಥಳದಲ್ಲಿ ಮತ್ತ್ಯಾವುದೋ ತೊಂದರೆ ಕಂಡುಬಂದರೆ ಸಮಯದ ಬದಲಾವಣೆಯಾಗುವ ಸಾಧ್ಯತೆಯೂ ಇದೆ ಎಂದು ಮಾಹಿತಿ ನೀಡಿದರು.
ಲ್ಯಾಂಡರ್ ಮತ್ತು ರೋವರ್ ಅಗತ್ಯಕ್ಕನುಗುಣವಾಗಿ ಅಲ್ಲಿನ ಸ್ಥಿತಿಗತಿಗಳನ್ನು ಅರಿತು ನಿರ್ಧಾರಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಯನ್ನು ಕೂಡ ಇಸ್ರೋ ಸಂಸ್ಥೆ ಈ ಬಾರಿ ಕಾರ್ಯರೂಪಕ್ಕೆ ತಂದಿದೆ. ಎಲ್ಲದೂ ಅಂದುಕೊಂಡಂತೆ ನಡೆದರೆ 1 ಲೂನಾರ್ ದಿನ (ಪೃಥ್ವಿಯ 14 ದಿನಗಳು) ರೋವರ್ ಸಾಧ್ಯವಾದಷ್ಟು ಅಲ್ಲಿ ಹವಾಗುಣ, ವಾತಾವರಣ, ಖನಿಜ ಸಂಪತ್ತು, ಮಣ್ಣು, ನೀರು ಮತ್ತು ಇತರ ವಿಚಾರದ ಮಾಹಿತಿಯನ್ನು ಅತಿ ಶೀಘ್ರವಾಗಿ ಕಳುಹಿಸುವ ವ್ಯವಸ್ಥೆ ಮಾಡಿದೆ ಎಂದು ತಿಳಿಸಿದರು.
ಐದು ಮುಖ್ಯ ಪರೀಕ್ಷೆಗಳನ್ನು ಅಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ. ಮುಖ್ಯವಾಗಿ ಸಾಫ್ಟ್ ಲ್ಯಾಂಡಿಂಗ್ ಕುರಿತು ಬಾಹ್ಯಾಕಾಶ ಸಂಸ್ಥೆ ಸದ್ಯ ಗಮನಹರಿಸಿದೆ. ಚಂದ್ರಯಾನ 2ರ ತಪ್ಪುಗಳನ್ನು ಮತ್ತು ಲುನಾರ್ 25 ವಿಫಲವಾದ ಅನುಭವ ತೆಗೆದುಕೊಂಡು ಮುನ್ನಡೆಯುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ:'ಚಂದಮಾಮ'ನ ಸ್ಪರ್ಶಿಸಲು ಭಾರತದ ಕಾತರ: ಇಸ್ರೋ ಮಾಜಿ ವಿಜ್ಞಾನಿ ಮನೀಶ್ ಪುರೋಹಿತ್ ಹೇಳಿದ್ದೇನು?