ಬೆಂಗಳೂರು: ರಕ್ಷಣಾ ಸಂಸ್ಥೆಗಳ ಸುತ್ತಲಿನ ಪ್ರದೇಶಗಳಲ್ಲಿ ಕಟ್ಟಡಗಳ ನಿರ್ಮಾಣ ನಿರ್ಬಂಧಿಸುವ ಕುರಿತು ಕಾರ್ಯಕಾರಿ ಅಧಿಕಾರ ಬಳಸಿ ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮಾರ್ಗಸೂಚಿ ಹೊರಡಿಸುವಂತಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಜಂಬೋಪ್ಲಾಸ್ಟಿಕ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿತು.
ರಕ್ಷಣಾ ಸಂಸ್ಥೆಗಳ ಸುತ್ತಮುತ್ತಲ ಉದ್ದೇಶಿತ ಕಟ್ಟಡಗಳ ನಿರ್ಮಾಣ ನಿರ್ಬಂಧಿಸಲು ವರ್ಕ್ಸ್ ಆಫ್ ಡಿಫೆನ್ಸ್ ಆ್ಯಕ್ಟ್ 1903ರ ಅಡಿಯಲ್ಲಿ ಶಾಸನಾತ್ಮಕ ಅಧಿಕಾರ ಲಭ್ಯವಿರುವಾಗ ಅಧಿಕಾರಿಗಳು ಕಾರ್ಯಾಕಾರಿ ಅಧಿಕಾರ ಬಳಸಿ ಮಾರ್ಗಸೂಚಿ ಹೊರಡಿಸುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಆಸ್ತಿಯ ಮಾಲೀಕರು ನಿಯಮದಂತೆ ಕಟ್ಟಡ ನಿರ್ಮಾಣಕ್ಕೆ ನಕ್ಷೆಗೆ ಅನುಮೋದನೆ ಕೇಳಿದ್ದಾರೆ. ಅದನ್ನು ಆದೇಶದ ಮೂಲಕ ಹತ್ತಿಕ್ಕಲಾಗದು. ಹಾಗಾಗಿ ರಕ್ಷಣಾ ಅಕಾರಿಗಳು ಹೊರಡಿಸಿರುವ ಮಾರ್ಗಸೂಚಿ ಅಕ್ರಮ ಹಾಗೂ ಅರ್ಜಿದಾರರ ಹಕ್ಕು ಮೊಟಕುಗೊಳಿಸಿದಂತಾಗಲಿದೆ ಎಂದು ನ್ಯಾಯಪೀಠ ತಿಳಿಸಿದೆ. ಮಾರ್ಗಸೂಚಿಯನ್ನು ಪಾಲನೆ ಮಾಡದೆ ಅರ್ಜಿದಾರರಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಂತೆ ಬಿಬಿಎಂಪಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರ ಕಂಪನಿ ನಗರದ ತುಮಕೂರು ರಸ್ತೆಯಲ್ಲಿ ಜಾಗವನ್ನು ಹೊಂದಿತ್ತು. ಆ ಜಾಗಕ್ಕೆ ಹೊಂದಿಕೊಂಡಂತೆ ರಕ್ಷಣಾ ಇಲಾಖೆಯ ಜಾಗವಿತ್ತು. ಅರ್ಜಿದಾರರು ವಸತಿ ಯೋಜನೆ ಕೈಗೊಳ್ಳಲು 2015ರಲ್ಲಿ ಬಿಬಿಎಂಪಿಗೆ ನಕ್ಷೆ ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಬಿಬಿಎಂಪಿ ನಕ್ಷೆ ಮಂಜೂರು ಮಾಡಲು ರಕ್ಷಣಾ ಸಚಿವಾಲಯದಿಂದ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಕೇಳಿದ್ದರು.
ಆದರೆ ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಾವು ಒಂದು ಮಾರ್ಗಸೂಚಿ ಹೊರಡಿಸಿದ್ದು, ಅದಕ್ಕೆ ರಕ್ಷಣಾ ಸಂಸ್ಥೆಗಳ ಸುತ್ತಮುತ್ತ ಕಟ್ಟಡ ನಿರ್ಮಾಣಕ್ಕೆ ಅವಕಾಶವಿಲ್ಲ. ಹಾಗಾಗಿ ಎನ್‌ಒಸಿ ನೀಡಲಾಗದು ಎಂದು ಹೇಳಿದ್ದರು. ಅದರಂತೆ ಬಿಬಿಬಿಂಪಿಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕರು ನಕ್ಷೆ ಅನುಮೋದನೆ ನೀಡಲಾಗದು ಎಂದು ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿತ್ತು.
ಮನೆ ನಿರ್ಮಿಸಲು ಅವಕಾಶ ನೀಡಿದ ಹೈಕೋರ್ಟ್: ಬಂಡೀಪುರ ಸಮೀಪದ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ನಟ ಗಣೇಶ್ ಕಿಶನ್ ಅವರಿಗೆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿರುವ ಹೈಕೋರ್ಟ್, ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ತಿಳಿಸಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿಯ ಜಕ್ಕಳ್ಳಿಯಲ್ಲಿ ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಅರಣ್ಯ ಇಲಾಖೆ ನೀಡಿದ್ದ ನೊಟೀಸ್ ಪ್ರಶ್ನಿಸಿ ಗಣೇಶ್ ಕಿಶನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ ಸೆ.1ರಂದು ಈ ಆದೇಶ ನೀಡಿದೆ.
ಪ್ರಕರಣದ ಹಿನ್ನೆಲೆ: ಬಂಡಿಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಚಿತ್ರನಟ ಗಣೇಶ್ ಜಮೀನು ಖರೀದಿಸಿದ್ದರು. ಈ ಜಮೀನಿನಲ್ಲಿ ಅವರು ಬೃಹತ್ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಅರಣ್ಯ ಇಲಾಖೆ ಗಣೇಶ್ಗೆ ನೊಟೀಸ್ ಜಾರಿ ಮಾಡಿತ್ತು. ಅಲ್ಲದೇ ಮುಂದಿನ ಆದೇಶದವರೆಗೂ ಕಾಮಗಾರಿ ನಡೆಸದಂತೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿದ ಗಣೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ:ನಟ ಗಣೇಶ್ ಅವರಿಗೆ ಮನೆ ನಿರ್ಮಿಸಲು ಅವಕಾಶ ನೀಡಿದ ಹೈಕೋರ್ಟ್