ಬೆಂಗಳೂರು:ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡಿರುವ ಬಿಜೆಪಿ ಅಭ್ಯರ್ಥಿಗಳ ಕಣ್ಣು ಈಗ ಲೋಕಸಭೆ ಚುನಾವಣೆ ಮೇಲೆ ನೆಟ್ಟಿದೆ. ತೀವ್ರ ಪೈಪೋಟಿಯಿಂದ ಕೂಡಿರುವ ಸಂಸತ್ತಿನ ಚುನಾವಣೆಯ ಟಿಕೆಟ್ ಪಡೆಯಲು ಭಗೀರಥ ಪ್ರಯತ್ನ ನಡೆಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಹಲವಾರು ಪರಾಜಿತ ಅಭ್ಯರ್ಥಿಗಳು ಸಂಸತ್ತಿನ ಚುನಾವಣೆ ಪ್ರಚಾರವನ್ನೂ ಸಹ ತೆರೆಮರೆಯಲ್ಲಿ ನಡೆಸಿದ್ದಾರೆ.
ಭಾರತೀಯ ಜನತಾ ಪಕ್ಷದಲ್ಲಿ ಹತ್ತಕ್ಕೂ ಹೆಚ್ಚು ಜನ ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಮಾಜಿ ಸಚಿವರು, ಮಾಜಿ ಶಾಸಕರು ಲೋಕಸಭೆ ಚುನಾವಣೆ ಟಿಕೆಟ್ ಗಿಟ್ಟಿಸಿಕೊಳ್ಳಲು ಈಗಿನಿಂದಲೇ ಲಾಬಿ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಪ್ರಧಾನಿ ಮೋದಿ ಅವರ ಜನಪ್ರಿಯ ಅಲೆಯಲ್ಲಿ ಲೋಕಸಭೆ ಚುನಾವಣೆ ಗೆಲವು ಕಷ್ಟವಾಗಲಾರದು ಎನ್ನುವ ಅಭಿಪ್ರಾಯದಿಂದ ಹೆಚ್ಚಿನ ಮುಖಂಡರು ಸಂಸತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಸಕ್ತಿ ಹೊಂದಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ತಮಗೆ ಟಿಕೆಟ್ ನೀಡಬೇಕೆಂದು ಮಾಜಿ ಸಚಿವರು ಮತ್ತು ಮಾಜಿ ಶಾಸಕರುಗಳು ರಾಜ್ಯ ಬಿಜೆಪಿ ನಾಯಕರು ಮತ್ತು ದೆಹಲಿ ನಾಯಕರುಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ. ತಮಗೆ ಟಿಕೆಟ್ ನೀಡಿದರೆ ಗೆಲ್ಲುವ ವಿಶ್ವಾಸವನ್ನು ಸಹ ಅವರುಗಳು ಪಕ್ಷದ ವೇದಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವ ಮಾಜಿ ಸಚಿವರಾದ ಸಿ ಟಿ ರವಿ, ಬಿ ಸಿ ಪಾಟೀಲ್, ವಿ ಸೋಮಣ್ಣ, ಎಂ ಪಿ ರೇಣುಕಾಚಾರ್ಯ, ಡಾ.ಡಿ ಸುಧಾಕರ್, ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ, ಮಾಜಿ ಸಾರಿಗೆ ಸಚಿವ ಶ್ರೀರಾಮುಲು, ಕರುಣಾಕರ ರೆಡ್ಡಿ, ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ಹಲವಾರು ಮುಖಂಡರುಗಳು ಲೋಕಸಭೆ ಚುನಾವಣೆ ಸ್ಪರ್ಧೆಗಾಗಿ ಬಿಜೆಪಿಯ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಹಲವಾರು ಲೋಕಸಭೆ ಸದಸ್ಯರುಗಳು ಬರಲಿರುವ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ನಿರಾಸಕ್ತಿ ತೋರಿರುವುದು ಹಾಗೂ ವಯೋಮಾನದ ಕಾರಣದಿಂದ ಹಾಲಿ ಸಂಸದರುಗಳಿಗೆ ಟಿಕೆಟ್ ನೀಡದೇ ಇರುವ ಬಗ್ಗೆ ಪಕ್ಷದ ಹೈಕಮಾಂಡ್ ಯೋಚಿಸುತ್ತಿರುವುದು ವಿಧಾನಸಭೆ ಚುನಾವಣೆಯಲ್ಲಿ ಸೋತಿರುವ ಅಭ್ಯರ್ಥಿಗಳಿಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಕಸರತ್ತು ನಡೆಸುವುದಕ್ಕೆ ಪ್ರಬಲವಾದ ಅಸ್ತ್ರ ದೊರೆತಂತಾಗಿದೆ.