ಬೆಂಗಳೂರು: ಬಂಧನಕ್ಕೊಳಗಾಗಿದ್ದ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸೇರಿ ಐವರಿಗೆ 8ನೇ ಎಸಿಎಂಎಂ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿದ್ದ ಹಿನ್ನೆಲೆಯಲ್ಲಿ ಸಚಿವ ಮುನಿರತ್ನ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ಡಿ. ಕೆಂಪಣ್ಣ ಅವರನ್ನು ಶನಿವಾರ ಬಂಧಿಸಲಾಗಿತ್ತು.
ಬಂಧನದ ಬಳಿಕ ಪೊಲೀಸರು ಕೋರಮಂಗಲದಲ್ಲಿರುವ ನ್ಯಾಯಾದೀಶರ ನಿವಾಸಕ್ಕೆ ಕರೆದೊಯ್ದು ಹಾಜರುಪಡಿಸಿದ್ದರು. ಗಂಭೀರ ಅಪರಾಧ ಪ್ರಕರಣ ಅಲ್ಲದಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಬಂಧಿತ ಐವರಿಗೂ ಜಾಮೀನು ಮಂಜೂರು ಮಾಡಿದ್ದಾರೆ. ಸೋಮವಾರ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ಸುಮಾರು ಅರ್ಧ ಗಂಟೆ ಕಾಲ ನಡೆದ ವಾದ ವಿವಾದದ ಬಳಿಕ ನ್ಯಾಯಾಧೀಶರು ಷರತ್ತುಬದ್ಧ ಜಾಮೀನಿಗೆ ಆದೇಶಿಸಿದರು. ಶ್ಯೂರಿಟಿ ಮತ್ತು ವೈಯಕ್ತಿಕ ಬಾಂಡ್ ನೀಡಬೇಕೆಂದು ಸೂಚಿಸಿದರು. ಆದೇಶದಂತೆ ಕೆಂಪಣ್ಣ ಮತ್ತಿರರು ಶನಿವಾರ ಮಧ್ಯರಾತ್ರಿಯೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:40 ಪರ್ಸೆಂಟ್ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿ ನಾಲ್ವರು ಅರೆಸ್ಟ್