ಬೆಂಗಳೂರು: ರಾಜೀವ್ ಗಾಂಧಿ ವಸತಿ ನಿಗಮದಿಂದ ನಿರ್ಮಾಣ ಮಾಡುತ್ತಿರುವ ಒಂದು ಲಕ್ಷ ಮನೆಗಳ ಯೋಜನೆಯಲ್ಲಿ ಫಲಾನುಭವಿಗಳ ವಂತಿಕೆ ಮೊತ್ತದಲ್ಲಿ ಕಡಿಮೆ ಮಾಡಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಒಂದು ಮನೆಗೆ 10.90 ಲಕ್ಷ ರೂ.ಗಳನ್ನು ನಿಗದಿ ಮಾಡಲಾಗಿದೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು 7.10 ಲಕ್ಷ ರೂ. ಪಾವತಿ ಮಾಡಬೇಕಾಗಿತ್ತು. ಅದನ್ನು 6 ಲಕ್ಷ ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಇತರರು 7.90 ಲಕ್ಷ ರೂ.ಗಳನ್ನು ಪಾವತಿಸಬೇಕಾಗಿದ್ದು, ಅದನ್ನು 6.50 ಲಕ್ಷ ರೂ.ಗಳಿಗೆ ನಿಗದಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಒಂದು ಮನೆ ನಿರ್ಮಾಣಕ್ಕೆ 10.90 ಲಕ್ಷ ರೂ. ವೆಚ್ಚವಾಗಲಿದ್ದು, ಅದರಲ್ಲಿ 8.81 ಲಕ್ಷ ರೂ. ಕಟ್ಟಡ ನಿರ್ಮಾಣಕ್ಕೆ, 2.09 ಲಕ್ಷ ರೂ. ಮೂಲಸೌಕರ್ಯಕ್ಕೆ ವೆಚ್ಚವಾಗಲಿದೆ. ಅಪಾರ್ಟ್ಮೆಂಟ್ಗಳನ್ನು ನಾಲ್ಕು ಮಹಡಿಗಳಿಗೆ ಸೀಮಿತ ಮಾಡಲಾಗಿದೆ. ಅಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ ಸೌಲಭ್ಯ ಸಹ ಇರುತ್ತದೆ. ಬೆಂಗಳೂರಿನಲ್ಲಿ 50 ಸಾವಿರ ಮನೆಗಳ ನಿರ್ಮಾಣ ಆರಂಭವಾಗಿದ್ದು, 35 ಸಾವಿರ ಅರ್ಜಿಗಳು ಬಂದಿವೆ ಎಂದರು.
10 ಲಕ್ಷ ಮನೆಗಳ ನಿರ್ಮಾಣ: ರಾಜ್ಯದಲ್ಲಿ ಇದುವರೆಗೆ 5 ಲಕ್ಷ ಮನೆಗಳ ನಿರ್ಮಾಣ ಮಾಡಿ ಪೂರ್ಣಗೊಳಿಸಲಾಗಿದೆ. 3.5 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ನಡೆದಿದೆ. ಮಾರ್ಚ್ ಅಂತ್ಯದೊಳಗೆ ಇನ್ನೂ 5 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗುತ್ತದೆ. ಒಟ್ಟಾರೆ 10 ಲಕ್ಷ ಮನೆಗಳನ್ನು ನಮ್ಮ ಸರ್ಕಾರದ ಅವಧಿಯಲ್ಲಿ ನಿರ್ಮಾಣ ಮಾಡಿದಂತಾಗಿದೆ. ನಿರ್ಮಾಣ ಮಾಡಬೇಕಾಗಿರುವ ಮನೆಗಳಿಗೆ 5 ಸಾವಿರ ಕೋಟಿ ರೂ.ಗಳ ಅಗತ್ಯವಿದೆ. ಇಲಾಖೆ ಬೊಕ್ಕಸದಲ್ಲಿ ಸುಮಾರು 2 ಸಾವಿರ ಕೋಟಿ ರೂ.ಗಳಿವೆ ಎಂದು ತಿಳಿಸಿದರು.
13 ಲಕ್ಷ ಅರ್ಜಿಗಳ ಪರಿಶೀಲನೆ: ರಾಜ್ಯ ಮಟ್ಟದ ಅಧಿಕಾರಿಗಳು ಜಿಲ್ಲಾ ಮತ್ತು ತಾಲೂಕು ಮಟ್ಟಕ್ಕೆ ಹೋಗಿ ಮನೆಗಳ ನಿರ್ಮಾಣ ಪರಿಶೀಲನೆ ಮಾಡಬೇಕು. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಗ್ರಾಮಗಳಿಗೆ ಹೋಗಿ ಖುದ್ದು ಪರಿಶೀಲನೆ ಮಾಡಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಹಿಂದೆ ಇಂದಿರಾ ವಿಷಲ್ ಆ್ಯಪ್ ಸೇರಿ ಎರಡು ತಂತ್ರಾಂಶಗಳಿದ್ದವು. ಈಗ ಅವುಗಳನ್ನು ತೆಗೆದು ಹಾಕಲಾಗಿದೆ. ಅರ್ಜಿ ಸಲ್ಲಿಸುವುದನ್ನು ಸುಲಭ ಮಾಡಲಾಗಿದೆ. ಅರ್ಹರ ಪತ್ತೆಗೂ ಇದರಿಂದ ಸಹಾಯವಾಗುತ್ತಿದೆ. ರಾಜ್ಯದಲ್ಲಿ ಅನರ್ಹರನ್ನು ಸಹ ಪತ್ತೆ ಹಚ್ಚಲಾಗುತ್ತಿದೆ. 13 ಲಕ್ಷ ಅರ್ಜಿಗಳ ಬಗ್ಗೆ ಅನುಮಾನ ಬಂದು ಪರಿಶೀಲನೆ ಮಾಡಲಾಗಿತ್ತು. ರದ್ದು ಮಾಡಲು ಮುಂದಾಗಿದ್ದೆವು. ಅವುಗಳಲ್ಲಿ ಕೆಲವೊಂದಕ್ಕೆ ಮತ್ತೆ ಅವಕಾಶ ನೀಡಲಾಗಿದೆ ಎಂದರು.
ಎರಡು ಬಾರಿ ಅನುದಾನ ಪಡೆಯುವುದು ಅಸಾಧ್ಯ: ಪ್ರವಾಹದಿಂದ ಮನೆಗಳಿಗೆ ಹಾನಿಯಾಗಿರುವ ಕಡೆ ಅನುದಾನ ಬಿಡುಗಡೆಗೆ ಯಾವುದೇ ಸಮಸ್ಯೆ ಇಲ್ಲ. ಎ, ಬಿ ಮತ್ತು ಸಿ ಎಂದು ವಿಂಗಡಿಸಲಾಗಿದೆ. ಇಲ್ಲಿ ಒಂದು ಗುಂಪಿನಲ್ಲಿ ಅನುದಾನ ಪಡೆದರೆ ಮತ್ತೊಂದರಲ್ಲಿ ಪಡೆಯಲು ಸಾಧ್ಯವಿಲ್ಲ. ಬಿ ಮತ್ತು ಸಿ ನಲ್ಲಿ ಅನುದಾನ ಪಡೆದವರು ಪೂರ್ಣ ಮನೆ ಬಿದ್ದು ಹೋದವರಿಗೆ ನೀಡುವ ಮೊತ್ತಕ್ಕಾಗಿ ಮನೆಗಳನ್ನು ಕೆಡವುತ್ತಿರುವ ದೂರುಗಳಿವೆ. ಅಂತಹವರು ಈಗಾಗಲೇ ಪರಿಹಾರ ಪಡೆದಿದ್ದರೆ ಮತ್ತೆ ನೀಡಲು ಸಾಧ್ಯವಿಲ್ಲ ಎಂದು ಸಚಿವರು ಹೇಳಿದರು.
ಇದನ್ನೂ ಓದಿ:ಬೆಂಗಳೂರು: ಲಾಟರಿ ಟಿಕೆಟ್ ಮೂಲಕ ಮನೆ ಹಂಚಿಕೆ...