ಬೆಂಗಳೂರು:ಹೆರಿಗೆ ವೇಳೆ ತಾಯಂದಿರ ಮರಣ ಪ್ರಮಾಣ ಇಳಿಮುಖವಾಗುತ್ತಿದ್ದು, ದೇಶದಲ್ಲೇ ಕರ್ನಾಟಕ ನಂ.1. ಹೀಗಂತ ಕೇಂದ್ರ ಆರೋಗ್ಯ ಮಂತ್ರಾಲಯದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗ ಇತ್ತೀಚೆಗೆ ಬಿಡುಗಡೆ ಮಾಡಿದ ಎಸ್ಆರ್ ಎಸ್ (ಸ್ಯಾಂಪಲ್ ರಿಜಿಸ್ಟ್ರೇಷನ್ ಸಿಸ್ಟ್ಂ) ಬುಲೆಟಿನ್ನಲ್ಲಿ ಹೇಳಲಾಗಿದೆ.
ತಾಯಂದಿರ ಮರಣ ಪ್ರಮಾಣ ಇಳಿಕೆ; ದೇಶದಲ್ಲೇ ಕರ್ನಾಟಕ ನಂ.1 ದೇಶದಲ್ಲಿ ಸರಾಸರಿ ಶೇ.6.2 ರಷ್ಟುತಾಯಂದಿರ ಮರಣ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇನ್ನು ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಕರ್ನಾಟಕದಲ್ಲಿ ಶೇ.10.2ರಷ್ಟು ಕಡಿಮೆಯಾಗಿದೆ. ಗರ್ಭಿಣಿಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಆರೋಗ್ಯ ಇಲಾಖೆ ಹಮ್ಮಿಕೊಳ್ಳುತ್ತಿರುವ ಕಾರ್ಯಕ್ರಮಗಳಿಂದಾಗಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ರಾಜ್ಯದಲ್ಲಿ ಸಾಕಷ್ಟು ಕಡಿಮೆಯಾಗುತ್ತಿದೆ.
ಪ್ರತಿ ಎರಡು ವರ್ಷಕ್ಕೊಮ್ಮೆ ಹೆರಿಗೆ ವೇಳೆ ತಾಯಿಯ ಮರಣದ ಅನುಪಾತ ಕುರಿತಂತೆ ಎಸ್ಆರ್ಎಸ್ ಬುಲೆಟಿನ್ ಬಿಡುಗಡೆ ಮಾಡುತ್ತಿದ್ದು, ಇತ್ತೀಚೆಗೆ 2015-17ನೇ ಅವಧಿಯ ಬುಲೆಟಿನ್ ಬಿಡುಗಡೆಯಾಗಿದೆ. ಹೆರಿಗೆ ವೇಳೆ ತಾಯಿಯ ಮರಣ ಪ್ರಮಾಣ ಇಳಿಮುಖ ಆಗುವುದರಲ್ಲಿ ಶೇ.10ಕ್ಕಿಂತ ಹೆಚ್ಚಿನ ಸಾಧನೆ ಮಾಡಿರುವ ದೇಶದ ಏಕೈಕ ರಾಜ್ಯ 'ಕರ್ನಾಟಕ ಎಂಬುದೇ ಹೆಮ್ಮೆಯ ವಿಚಾರ'. ಎರಡನೇ ಸ್ಥಾನ ಮಹಾರಾಷ್ಟ್ರಕ್ಕೆ ಲಭಿಸಿದ್ದು, ಇಲ್ಲಿ ಹೆರಿಗೆ ಸಂದರ್ಭದಲ್ಲಿ ತಾಯಿಯ ಮರಣದ ಅನುಪಾತ ಶೇ. 9.8ರಷ್ಟು ಇಳಿದಿದ್ದರೆ, ಮೂರನೇ ಸ್ಥಾನ ಪಡೆದಿರುವ ಕೇರಳದಲ್ಲಿ ಈ ಪ್ರಮಾಣ ಶೇ. 8.7ರಷ್ಟಿದೆ.
ವರ್ಷಕ್ಕೆ ಒಂದು ಲಕ್ಷಕ್ಕಿಂತ ಹೆಚ್ಚು ಹೆರಿಗೆ ಪ್ರಕರಣಗಳು ನಡೆಯುವ ರಾಜ್ಯಗಳನ್ನು ಈ ಸಮೀಕ್ಷೆಗೆ ಪರಿಗಣಿಸಲಾಗುತ್ತದೆ. ಹೀಗಾಗಿ 20 ರಾಜ್ಯಗಳಿಗೆ ಸಂಬಂಧಿಸಿದಂತೆ ಮಾತ್ರ ಸಮೀಕ್ಷೆ ನಡೆಸಿ ವರದಿ ಬಿಡುಗಡೆ ಮಾಡಲಾಗಿದೆ.