ಬೆಂಗಳೂರು:ಸಂಸದೀಯ ಮೌಲ್ಯಗಳ ಕುಸಿತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಆತ್ಮಾವಲೋಕನ ಸಭೆ ವಿಧಾನಸೌಧದಲ್ಲಿ ನಡೆಯಿತು.
ವಿಧಾನಸೌಧದಲ್ಲಿ ಆತ್ಮಾವಲೋಕನ ಸಭೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಿಎಂ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
ವಿಧಾನಸೌಧದಲ್ಲಿ ಯಶಸ್ವಿ ಆತ್ಮಾವಲೋಕನ ಸಭೆ ಕರ್ನಾಟಕ ವಿಧಾನ ಮಂಡಲ, ಕಾಮನ್ ವೆಲ್ತ್ ಸಂಸದೀಯ ಸಂಘ ವತಿಯಿಂದ ಆಯೋಜಿಸಿರುವ ಕಾರ್ಯಕ್ರಮವನ್ನು ಗಣ್ಯರು ದೀಪ ಬೆಳಗಿ ಉದ್ಘಾಟಿಸಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಶಾಸಕರು ಭಾಗವಹಿಸಿದ್ದರು.
ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ನಿವೃತ್ತ ನ್ಯಾಯಮೂರ್ತಿ ಕುಮಾರ್, ವಾಗ್ಮಿ ಗುರುರಾಜ ಖರ್ಜಗಿ, ಹಿರಿಯ ಪತ್ರಕರ್ತ ಹುಣಸವಾಡಿ ರಾಜನ್ ಮತ್ತಿತರರು ಮಾತನಾಡಿ ಅಮೂಲ್ಯ ಸಲಹೆ ನೀಡಿದರು.
ವಿಧಾನಸೌಧದಲ್ಲಿ ಯಶಸ್ವಿ ಆತ್ಮಾವಲೋಕನ ಸಭೆ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ರಾಜಕಾರಣಕ್ಕೆ ಬರುವುದೇ ಪುಣ್ಯ. ನೂರರಲ್ಲಿ 10 ಮಂದಿ ರಾಜಕಾರಣಕ್ಕೆ ಬರಬಹುದು. ನಾವು ಹೇಗೆ ನಡೆದುಕೊಳ್ಳುತ್ತೇವೆ ಅದು ಮುಖ್ಯ. ಜನಪ್ರತಿನಿಧಿಗಳು ಜನರ ಧ್ವನಿಯಾಗಬೇಕು, ವ್ಯವಸ್ಥೆಯ ಸುಳಿಯಾಗಬಾರದು. ಸಂವಿಧಾನದ ಚೌಕಟ್ಟಿನಲ್ಲಿ ಆಡಳಿತ ಮಾಡಬೇಕು, ರಾಜ್ಯ ಈ ವಿಚಾರದಲ್ಲಿ ಮೇಲ್ಪಂಕ್ತಿಯಾಗಬೇಕು. ಸಂವಿಧಾನದ ಜವಾಬ್ದಾರಿಗಳು ಸಾಕಷ್ಟಿವೆ, ಜನರ ಕಷ್ಟ-ಸುಖಗಳಲ್ಲಿ ಭಾಗಿಯಾಗಬೇಕು. ಇದಕ್ಕೆ ಪೂರಕವಾದ ಅಧ್ಯಯನಗಳು ಬೇಕು ಎಂದು ಇಂದಿನ ವಾಸ್ತವ ಸ್ಥಿತಿಯ ಬಗ್ಗೆ ಕಾಗೇರಿ ಪ್ರಸ್ತಾಪ ಮಾಡಿದರು.
ಮುಂದೊಂದು ದಿನ ಅರಾಜಕತೆ ಎದುರಾಗಬಹುದು. ಅಂತಹ ಪರಿಸ್ಥಿತಿ ಬರುವುದನ್ನ ತಡೆಯಬೇಕು. ವಿಶ್ವಮಟ್ಟದಲ್ಲಿ ಇಂತಹ ಚರ್ಚೆಗಳು ನಡೆಯುತ್ತಿವೆ. ಹಾಗಾಗಿಯೇ ಈ ಆತ್ಮಾವಲೋಕನ ಸಭೆ ಕರೆದಿದ್ದೇವೆ. ಸಂಸದೀಯ ವ್ಯವಸ್ಥೆ ಹೇಗಿರಬೇಕು? ಜನಪ್ರತಿನಿಧಿಗಳು ಮೌಲ್ಯ ಹೇಗೆ ಕಾಪಾಡಿಕೊಳ್ಳಬೇಕು. ಇದರ ಬಗ್ಗೆ ಆತ್ಮಾವಲೋಕನ ಅನಿವಾರ್ಯ ಎಂದರು.
ಜನಪ್ರತಿನಿಧಿಗಳು ಆದರ್ಶಪ್ರಾಯರಾಗಿರಬೇಕು:
ಸಿಎಂ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಹಿಂದೆ ರಾಜಕೀಯ ಮುತ್ಸದ್ದಿಗಳಿದ್ದರು. ಅವರು ದೇಶಕ್ಕಾಗಿ ನಾವು ಎಂಬ ಭಾವನೆಯಲ್ಲಿದ್ದರು. ನಂತರ ಬಂದವರು ದೇಶ ಇರೋದೇ ನಮಗಾಗಿ ಅಂದರು. ಇದೇ ಅಂದು ಇಂದಿನ ವ್ಯತ್ಯಾಸ. ಜನಪ್ರತಿನಿಧಿಗಳು ಆದರ್ಶಪ್ರಾಯರಾಗಿರಬೇಕು, ಜನಹಿತ ಬಿಟ್ಟು ಸ್ವಾರ್ಥಕ್ಕಾಗಿ ಬಳಸಬಾರದು. ಇದು ಬಸವಣ್ಣನವರ ಆಶಯ. ಜನರಿಂದ ಆರಿಸಿ ಬಂದವರಿಗೆ ಜನರ ಬಗ್ಗೆ ಕಾಳಜಿಯಿರಬೇಕು.
ಸಾಮಾಜಿಕ ಮೌಲ್ಯಗಳು ಇಂದು ಕುಸಿಯುತ್ತಿವೆ. ಶೋಷಿತರ, ದಮನಿತರ ಧ್ವನಿಯಾಗಬೇಕು. ಗಾಂಧಿಯವರ ಸರ್ವೋದಯದ ಕಲ್ಪನೆ ಇರಬೇಕಿದೆ. ಸದನದಲ್ಲಿ ಅಹಿತಕರ ಘಟನೆ ನಡೆಯಬಾರದು. ಆ ರೀತಿ ಸದನದಲ್ಲಿ ನಾವು ನಡೆದುಕೊಳ್ಳಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಅನುಷ್ಠಾನ ಸಾಧ್ಯ ಎಂದು ಹೇಳಿದರು.