ಕರ್ನಾಟಕ

karnataka

ETV Bharat / state

ಡಿಕೆಶಿ ವಿರುದ್ಧದ ಸಿಬಿಐ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ನಿರ್ಣಯ ಕಾನೂನು ಬಾಹಿರ: ಬಿ.ವೈ. ವಿಜಯೇಂದ್ರ - BY Vijayendra statement against Cabinet Decision

BY Vijayendra statement against Cabinet Decision: ಡಿ ಕೆ ಶಿವಕುಮಾರ್​ ಅವರನ್ನು ಉಳಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

BJP state President B Y Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

By ETV Bharat Karnataka Team

Published : Nov 24, 2023, 4:03 PM IST

Updated : Nov 24, 2023, 7:00 PM IST

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ

ಬೆಂಗಳೂರು:ಡಿ.ಕೆ. ಶಿವಕುಮಾರ್ ವಿರುದ್ಧ ಸಿಬಿಐ ತನಿಖೆಗೆ ನೀಡಿದ್ದ ಅನುಮತಿಯನ್ನು ವಾಪಸ್ ತೆಗೆದುಕೊಂಡಿರುವ ಸರ್ಕಾರದ ನಿರ್ಣಯ ಸಂಪೂರ್ಣ ಕಾನೂನು ಬಾಹಿರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಇದು ಅಕ್ರಮ ಆಸ್ತಿ ಗಳಿಕೆ ಪ್ರಕರಣ. ಈ ಪ್ರಕರಣದಲ್ಲಿ ಸರ್ಕಾರದ ನಿರ್ಣಯ ಸಂಪೂರ್ಣ ಕಾನೂನು ಬಾಹಿರ.‌ ಡಿ.ಕೆ. ಶಿವಕುಮಾರ್ ಅವರೇ ಸರ್ಕಾರದ ನಿರ್ಧಾರ ವಿರೋಧಿಸಬೇಕಿತ್ತು. ಈಗ ಡಿಕೆಶಿ ತಪ್ಪು ಮಾಡಿದ್ದಾರೆ ಎಂದು ಅವರೇ ಒಪ್ಪಿಕೊಂಡಂತೆ ಆಗಿದೆ. ಅವರಿಗೆ ಕಾನೂನಿನ ಭಯ ಇದೆಯಾ? ಎಂದು ಪ್ರಶ್ನಿಸಿದರು.

ಸರ್ಕಾರದ ಈ ಸಂಪುಟ ನಿರ್ಧಾರವನ್ನು ಬಿಜೆಪಿ ಬಲವಾಗಿ ವಿರೋಧಿಸುತ್ತದೆ. ಇದರ ವಿರುದ್ಧ ಮುಂದೆ ಯಾವ ರೀತಿ ಹೋರಾಟ ಮಾಡಬೇಕು ಅಂತ ಚರ್ಚೆ ನಡೆಸಿ ನಿರ್ಧರಿಸಲಿದೆ.‌ ನಮ್ಮ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರ ರಾಜಕೀಯ ಪ್ರೇರಿತ ಆಗಿರಲಿಲ್ಲ. ಪ್ರಾಥಮಿಕ ತನಿಖೆಯಲ್ಲಿ ಅಕ್ರಮ ಆಗಿದೆ ಎನ್ನುವ ಮಾಹಿತಿ ಆಧಾರದಲ್ಲಿ ಹಿಂದೆ ಸಿಬಿಐಗೆ ತನಿಖೆಗೆ ಅನುಮತಿ ಕೊಡಲಾಗಿತ್ತು ಎಂದು ಹೇಳಿದರು.

ಐಟಿ ದಾಳಿ ಆದಾಗ ರಾಜ್ಯ ಮತ್ತು ಬೇರೆ ಬೇರೆ ಭಾಗಗಳಲ್ಲಿ ಸಾಕಷ್ಟು ಹಣ ಸೀಜ್ ಆಗಿತ್ತು. ಇನ್ನು ಐಟಿ ತನಿಖೆಯೂ ನಡೆಯುತ್ತಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರ ದುರಾದೃಷ್ಟಕರ. ಸರ್ಕಾರ ಕಾನೂನಿಗೆ ವಿರುದ್ಧವಾಗಿ ಈ ನಿರ್ಣಯ ಕೈಗೊಂಡಿದೆ. ಡಿಕೆಶಿ ಅವರನ್ನು ಉಳಿಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಡಿಕೆಶಿ ಅವರಿಗೆ ಈಗ ಗೋಲ್ಡನ್ ಅಪಾರ್ಚುನಿಟಿ ಇದೆ. ಅವರು ತಾವು ಸತ್ಯ ಹರಿಶ್ಚಂದ್ರರು ಅಂತ ಸಾಬೀತು ಮಾಡುವ ಅವಕಾಶ ಇದೆ. ಜನತೆಯ ಮುಂದೆ ನೀವು ತಪ್ಪು ಮಾಡಿಲ್ಲ ಎಂದು ತನಿಖೆ ಎದುರಿಸಿ ತೋರಿಸಿ ಎಂದು ಸವಾಲು ಹಾಕಿದರು.

ಡಿಕೆಶಿ ಪ್ರಕರಣದ ಬಗ್ಗೆ ಸಿಬಿಐ ಜತೆ ಐಟಿ, ಇಡಿ ಸಂಸ್ಥೆಗಳೂ ತನಿಖೆ ನಡೆಸುತ್ತಿವೆ. ಆದರೆ, ಈ ಹಂತದಲ್ಲಿ ಸಂಪುಟ ನಿರ್ಧಾರ ಕೈಗೊಂಡಿರೋದು ತಪ್ಪು. ಈ‌ ನಿರ್ಧಾರ ಸಂಪೂರ್ಣ ಕಾನೂನು ಬಾಹಿರ. ಶಿವಕುಮಾರ್ ಅವರು ಯಾಕಾಗಿ ಭಯ ಪಡುತ್ತಿದ್ದಾರೆ. ಕಾನೂನಿನ ಮೇಲೆ ಡಿಕೆಶಿಗೆ ವಿಶ್ವಾಸ ಇಲ್ಲವೇ?. ಡಿಕೆಶಿ ಪ್ರಾಮಾಣಿಕರಾಗಿದ್ದರೆ ಸಚಿವ ಸಂಪುಟ ನಿರ್ಧಾರಕ್ಕೆ ವಿರೋಧ ಮಾಡಲಿ ಎಂದರು.

ಹಿಂದಿನ ಎಜಿ ಪ್ರಭುಲಿಂಗ ನಾವದಗಿ ಅವರ ವರದಿ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಹಿಂದಿನ ನಮ್ಮ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಇದರ ಬಗ್ಗೆ ತೀರ್ಮಾನಿಸಿಲ್ಲ. ಡಿ.ಕೆ. ಶಿವಕುಮಾರ್ ಆದಾಯ ಮೀರಿದ ಆಸ್ತಿ ಗಳಿಸಿದ್ದಾರೆ ಎಂದು ಬಹಿರಂಗವಾಗಿ ಗೊತ್ತಾಗಿದೆ. ಸರ್ಕಾರ ಇಂಥ ಕೆಟ್ಟ ನಿರ್ಧಾರದಿಂದ ಹಿಂದಕ್ಕೆ ಸರಿಯಲಿ. ಡಿಕೆಶಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಮೂಗು ತೂರಿಸಬಾರದು. ಈ ಮೂಲಕ ಸರ್ಕಾರ ದೇಶಕ್ಕೆ ಯಾವ ಸಂದೇಶ ಕೊಡ್ತಿದೆ? ಎಂದು ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬೆಳಗಾವಿ ಅಧಿವೇಶನದಲ್ಲಿ ಹಲವು ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕಬ್ಬು ಬೆಳೆಗಾರರ ಸಮಸ್ಯೆ, ಸಚಿವ ಜಮೀರ್ ಅಹಮದ್ ಅವರ ಅಸಂಬದ್ಧ ಹೇಳಿಕೆ, ಡಿಕೆಶಿ ಪ್ರಕರಣ ಇವೆ. ಜಮೀರ್ ಅಹಮದ್ ಹೇಳಿಕೆಯನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಡಿ.ಕೆ.ಶಿವಕುಮಾರ್ ಸಿಬಿಐ ತನಿಖೆ ವಾಪಸ್: 'ನೈತಿಕವಾಗಿ ಹಾಗೂ ಕಾನೂನಾತ್ಮಕವಾಗಿ ಸರಿಯಲ್ಲ'- ಪ್ರಹ್ಲಾದ್ ‌ಜೋಶಿ

Last Updated : Nov 24, 2023, 7:00 PM IST

ABOUT THE AUTHOR

...view details