ಬೆಂಗಳೂರು:ಮೊದಲು ಗ್ರಾಮ ಪಂಚಾಯಿತಿಗಳಾಗಿದ್ದು, ಈಗ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾಗಳಿಗೆ ಪ್ರತಿಯೊಬ್ಬರಿಗೂ ದಿನಕ್ಕೆ 135 ಲೀಟರ್ ನೀರು ಒದಗಿಸುವ ರೀತಿಯಲ್ಲಿ ನೀರು ಪೂರೈಕೆ ಯೋಜನೆಗಳನ್ನು ಪರಿಷ್ಕರಿಸಿ, ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.
ವಿಜಯಪುರ ನಗರ ಮತ್ತು ಬಬಲೇಶ್ವರ, ತಿಕೋಟಾ ಪಟ್ಟಣಗಳ ಕುಡಿವ ನೀರು ಪೂರೈಕೆ ಯೋಜನೆಗಳಿಗೆ ಸಂಬಂಧಿಸಿದಂತೆ ಗುರುವಾರ ಸಂಜೆ ವಿಧಾನಸೌಧದ ತಮ್ಮ ಕಚೇರಿಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಸಚಿವರು, ಬಬಲೇಶ್ವರ ಮತ್ತು ತಿಕೋಟಾಗಳಿಗೆ ಮೊದಲು ಪ್ರತೀ ವ್ಯಕ್ತಿಗೆ ದಿನಕ್ಕೆ 55 ಲೀ. ನೀರು ಒದಗಿಸುವ ಮಾನದಂಡಕ್ಕೆ ಅನುಗುಣವಾಗಿ ಗ್ರಾಮೀಣ ಕುಡಿಯುವ ನೀರು ಪೂರೈಕೆ ಯೋಜನೆ ಮಂಜೂರಾಗಿ, ಇದಕ್ಕೆ 82 ಕೋಟಿ ರೂ. ಒದಗಿಸಲಾಗಿತ್ತು.
ಆದರೆ, ಈಗ ಎರಡೂ ಊರುಗಳು ಪಟ್ಟಣ ಪಂಚಾಯಿತಿಗಳಾಗಿವೆ. ಹೀಗಾಗಿ, ನಗರ/ಪಟ್ಟಣ ಕುಡಿವ ನೀರು ಪೂರೈಕೆ ಯೋಜನೆಯಂತೆ ಯೋಜನೆಗಳ ಮರುವಿನ್ಯಾಸ ಮಾಡಿ, ಇನ್ಮುಂದೆ 24/7 ನೀರು ಪೂರೈಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಹಾಗೆಯೇ, ವಿಜಯಪುರ ನಗರಕ್ಕೆ ಕೊಲಾರದಿಂದ ನೀರನ್ನು ಹೊತ್ತು ತರುವ 10.74 ಕಿ.ಮೀ. ಉದ್ದದ ಕಾಂಕ್ರೀಟ್ ಪೈಪುಗಳಲ್ಲಿ ಸೋರಿಕೆ ಕಂಡು ಬರುತ್ತಿದೆ. ಆದ್ದರಿಂದ ಇಲ್ಲಿ ಉತ್ಕೃಷ್ಟ ದರ್ಜೆಯ ಎಂಎಸ್ ಪೈಪ್ ಹಾಕಬೇಕು. 2018ರಲ್ಲಿ ಇದಕ್ಕೆ 32 ಕೋಟಿ ರೂ. ಮಂಜೂರಾಗಿದ್ದರೂ ಟೆಂಡರ್ ರದ್ದಾಗಿತ್ತು. ಈಗ ಇದನ್ನು ಪರಿಷ್ಕರಿಸಿದ್ದು, 52 ಕೋಟಿ ರೂ. ಅಂದಾಜು ವೆಚ್ಚವಾಗಲಿದೆ ಎಂದು ನಿರ್ಧರಿಸಲಾಗಿದೆ. ಈ ವಿಷಯವನ್ನು ತ್ವರಿತವಾಗಿ ಸಚಿವ ಸಂಪುಟದ ಮುಂದೆ ಮಂಡಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.