ಬೆಂಗಳೂರು:''ಸಣ್ಣ ನೇಕಾರರಿಗೆ 10 ಹೆಚ್ಪಿವರೆಗೆ ಸಂಪೂರ್ಣ ಉಚಿತ ವಿದ್ಯುತ್ ನೀಡುವ ಕುರಿತಂತೆ ಪರಿಶೀಲಿಸಿ ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುವುದು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಅಡಿ 10 ಹೆಚ್ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ಮಗ್ಗ ಮತ್ತು ಮಗ್ಗ ಪೂರ್ವ ಘಟಕಗಳಿಗೆ ವಿದ್ಯುತ್ ಒದಗಿಸುವ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಬಗ್ಗೆ ನಡೆದ ಸಭೆಯಲ್ಲಿ ಸಿಎಂ ಭರವಸೆ ನೀಡಿದರು.
ನೇಕಾರರಿಗೆ ಉಚಿತ ವಿದ್ಯುತ್- ಸಿಎಂ ಸಿದ್ದರಾಮಯ್ಯ:''10 ಹೆಚ್ಪಿವರೆಗೂ ಉಚಿತ ವಿದ್ಯುತ್ ನೀಡಬೇಕು ಎನ್ನುವ ಬೇಡಿಕೆ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದರು. 10 ಹೆಚ್ಪಿಗಿಂತ ಹೆಚ್ಚಿನ ವಿದ್ಯುತ್ ಬಳಸುವ ಮಗ್ಗಗಳ ಬಗ್ಗೆಯೂ ಚರ್ಚಿಸಲಾಯಿತು. ಎರಡೂ ವಿಚಾರಗಳ ಬಗ್ಗೆ ಪರಿಶೀಲಿಸಿ ಸದ್ಯದಲ್ಲೇ ತೀರ್ಮಾನ ತೆಗೆದುಕೊಳ್ಳಲಾಗುವುದು'' ಎಂದು ಸಿದ್ದರಾಮಯ್ಯ ತಿಳಿಸಿದರು. ''ಈ ಹಿಂದೆ ನೇಕಾರರಿಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಭರವಸೆ ನೀಡಿದ್ದೆ. ಇದರಿಂದ ಸಣ್ಣ ನೇಕಾರರಿಗೆ ಅನುಕೂಲವಾಗಲಿದೆ'' ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೈಮಗ್ಗ ಮತ್ತು ಜವಳಿ ಇಲಾಖೆ ಆಯುಕ್ತ ಗೌರವ್ ಗುಪ್ತಾ, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಮುಖ್ಯಮಂತ್ರಿಗಳ ಕಾರ್ಯದರ್ಶಿ ಜಯರಾಂ, ಜವಳಿ ಇಲಾಖೆ ಕಾರ್ಯದರ್ಶಿ ಪಿ.ಎಸ್.ಎನ್. ಕುಮಾರ್ ಉಪಸ್ಥಿತರಿದ್ದರು.
ನೇಕಾರರ ವಿಶೇಷ ಯೋಜನೆ:''ನೇಕಾರರ ವಿಶೇಷ ಯೋಜನೆ ಅಡಿ ಪ್ರಸ್ತುತ ಜಾರಿಯಲ್ಲಿರುವ 20 ಹೆಚ್ಪಿವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗದ ಘಟಕಗಳಿಗೆ 1.25 ರೂಪಾಯಿ ದರದಲ್ಲಿ ವಿದ್ಯುತ್ ಪೂರೈಕೆ ಯೋಜನೆ ಮುಂದುವರೆಸಲಾಗುವುದು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಇತ್ತೀಚೆಗೆ ತಮ್ಮನ್ನು ಭೇಟಿಯಾದ ನೇಕಾರರ ಸಮುದಾಯಗಳ ಒಕ್ಕೂಟ ನಿಯೋಗದ ಬೇಡಿಕೆಗಳಿಗೆ ಸಿಎಂ ಸ್ಪಂದಿಸಿ, ಈ ವಿಚಾರವನ್ನು ತಿಳಿಸಿದ್ದರು.
''10 ಹೆಚ್ಪಿವರೆಗಿನ ಘಟಕಗಳಿಗೆ 250 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಶೀಘ್ರವೇ ಆದೇಶ ಹೊರಡಿಸಲಾಗುತ್ತದೆ. ಅಲ್ಲದೇ ಹಿಂದುಳಿದ ವರ್ಗಗಳ 2ಎ ವರ್ಗದಡಿ ಬರುವ ಸಮುದಾಯಗಳ ಗುತ್ತಿಗೆದಾರರಿಗೆ 1 ಕೋಟಿ ರೂಪಾಯಿ ವರೆಗಿನ ಕಾಮಗಾರಿಗಳಲ್ಲಿ ಮೀಸಲಾತಿ ಘೋಷಣೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದರು.
ನೇಕಾರರ ಬೇಡಿಕೆಗಳು:ನೇಕಾರರ ಉತ್ಪಾದನೆಗಳ ಮಾರಾಟಕ್ಕೆ ನೇರ ಮಾರುಕಟ್ಟೆ ಕಲ್ಪಿಸಬೇಕು. ನೇಕಾರರಿಗೆ ಸಂಬಂಧಪಟ್ಟ ನಿಗಮ ಮಂಡಳಿ ಹಾಗೂ ಇಲಾಖೆಗೆ ಸಂಬಂಧಿಸಿದ ಎಲ್ಲ ಅಧ್ಯಕ್ಷ ಸ್ಥಾನಕ್ಕೆ ನೇಕಾರ ಸಮುದಾಯದವರನ್ನು ನೇಮಕ ಮಾಡಬೇಕು. ಸರ್ಕಾರದ ಯೋಜನೆಗಳ ನೇಕಾರ ಸಮ್ಮಾನ್, ಶಿಷ್ಯ ವೇತನ ಸಮುದಾಯದವರಿಗೆ ತಲುಪಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘಟನೆ ರಾಜ್ಯಾಧ್ಯಕ್ಷರಾದ ಶಿವಲಿಂಗ ಟಿರಕಿ, ಸಿಎಂ ಹಾಗೂ ಡಿಸಿಎಂ ಅವರಿಗೆ ಇತ್ತೀಚೆಗೆ ಮನವಿ ಮಾಡಿದ್ದರು.
ಇದನ್ನೂ ಓದಿ:ಸಿಎಂ, ಡಿಸಿಎಂ ಭೇಟಿಯಾದ ರೇಣುಕಾಚಾರ್ಯ; ಕುತೂಹಲ ಮೂಡಿಸಿದ ಬಿಎಸ್ವೈ ಆಪ್ತನ ನಡೆ