ಬೆಂಗಳೂರು :6.64 ಲಕ್ಷ ಹೆಕ್ಟೇರ್ ಭೂಮಿಯನ್ನು ಡೀಮ್ಡ್ ಫಾರೆಸ್ಟ್‌ನಿಂದ ಕೈಬಿಡಲು ನಿರ್ಧರಿಸಲಾಗಿದೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದರು. ವಿಧಾನಸಭೆಯಲ್ಲಿ ಭೂ ಕಂದಾಯ ತಿದ್ದುಪಡಿ ವಿಧೇಯಕ ಕುರಿತು ಚರ್ಚೆ ನಡೆಯುವ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ 9.94 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯಲ್ಲಿದೆ. ಈ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಸಮಿತಿ ರಚಿಸಿ ಅವರಿಂದ ಮಾಹಿತಿ ಪಡೆಯಲಾಗಿತ್ತು ಎಂದರು.
6.64 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಫಾರೆಸ್ಟ್‌ನಿಂದ ಕೈಬಿಡಲು ನಿರ್ಧಾರ: ಆನಂದ್ ಸಿಂಗ್ - Deemed Forest News
6.64 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಾಗೂ 3.30 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ತೀರ್ಮಾನ ಕೈಗೊಳ್ಳಲಾಗಿದೆ.
ಆ ಮೂಲಕ ಹಲವು ವರ್ಷಗಳಿಂದ ತಕರಾರಿದ್ದ ಡೀಮ್ಡ್ ಫಾರೆಸ್ಟ್ ಮತ್ತು ಕಂದಾಯ ಜಮೀನಿನ ಸಮಸ್ಯೆ ಬಗೆಹರಿಸುವಲ್ಲಿ ನಿರ್ಣಾಯಕ ನಿರ್ಧಾರ ಕೈಗೊಂಡಿದ್ದಾರೆ. ಇದೀಗ 6.64 ಲಕ್ಷ ಹೆಕ್ಟೇರ್ ಭೂಮಿಯನ್ನು ಕಂದಾಯ ಇಲಾಖೆಗೆ ಹಾಗೂ 3.30 ಲಕ್ಷ ಹೆಕ್ಟೇರ್ ಭೂಮಿಯನ್ನು ಅರಣ್ಯ ಇಲಾಖೆಗೆ ಬಿಟ್ಟುಕೊಡಲು ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಉಳಿದ 3.30 ಲಕ್ಷ ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಹಳ್ಳಿಗಳು, ಮನೆಗಳು ಬಂದರೆ ಮರುಪರಿಶೀಲನೆ ಮಾಡಿ ವಸತಿ ಪ್ರದೇಶದ ಆ ಜಾಗವನ್ನು ಕೂಡ ಕೈಬಿಡಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಶಾಸಕ ರಮೇಶ್‌ಕುಮಾರ್ ಅವರು, ಡೀಮ್ಡ್ ಫಾರೆಸ್ಟ್ ಪ್ರದೇಶವನ್ನು ಕಂದಾಯ ಇಲಾಖೆ ವ್ಯಾಪ್ತಿಗೆ ನೀಡುವ ಕುರಿತು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಹಾಕುವುದು ಬಾಕಿ ಇದ್ದು, ಶೀಘ್ರವೇ ಅಫಿಡವಿಟ್ ಹಾಕುವಂತೆ ಸಲಹೆ ನೀಡಿದರು. ಜತೆಗೆ ಆನಂದ್‌ಸಿಂಗ್ ಅವರು ಡೀಮ್ಡ್ ಫಾರೆಸ್ಟ್ ಅನ್ನು ಕೈಬಿಟ್ಟಿರುವ ನಿರ್ಧಾರದ ಬಗ್ಗೆ ಮುಕ್ತ ಕಂಠದಿಂದ ಹೊಗಳಿದರು.