ಬೆಂಗಳೂರು: ನೂತನ ವಿಜಯನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ದುರಸ್ತಿ, ನವೀಕರಣ ಮತ್ತು ಕಛೇರಿ ಮೂಲಸೌಕರ್ಯಕ್ಕೆ 53 ಕೋಟಿ ರೂ. ಅನುದಾನ ಒದಗಿಸಲು ಮಂಜೂರಾತಿ ನೀಡಲಾಗಿದೆ.
ಎರಡು ಹಂತಗಳಲ್ಲಿ ಹುದ್ದೆಗಳ ಸೃಜಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತಿ, ಎಸ್.ಪಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗಳನ್ನು ಪ್ರಾರಂಭಿಸಬೇಕು. ಅಲ್ಲದೇ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಗರ ಯೋಜನೆ ಹಾಗೂ ಅರಣ್ಯ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಬೇಕು. ಹಂತ ಹಂತವಾಗಿ ಎಲ್ಲ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಇದರಲ್ಲಿ ಕೆಲವು ಹುದ್ದೆಗಳನ್ನು ಬಳ್ಳಾರಿಯಿಂದ ಸ್ಥಳಾಂತರ ಮಾಡುವ ಮೂಲಕ ಹಾಗೂ ಕೆಲವು ಹುದ್ದೆಗಳ ಸೃಜನೆಯ ಮೂಲಕ ಜಿಲ್ಲಾ ಮಟ್ಟದ ಕಚೇರಿ ಸ್ಥಾಪಿಸಲಾಗುವುದು. ಜಿಲ್ಲಾ ಕಚೇರಿಗಳ ನಿರ್ಮಾಣಕ್ಕೆ ಕರ್ನಾಟಕ ಗೃಹಮಂಡಳಿಯ 83 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅನುದಾನವನ್ನು ಎರಡು ಹಂತದಲ್ಲಿ ವರ್ಗಾಯಿಸಲಾಗುವುದು ಎಂದರು.