ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆಯನ್ನು ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಮಾತನಾಡಿದ ಅವರು, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇಂದು ಚರ್ಚೆ ಮಾಡಿ ಅಂತಿಮಗೊಳಿಸಲಾಗುವುದು. ಸಂಭವನೀಯ ಅಭ್ಯರ್ಥಿಗಳಿಗೆ ಈಗಾಗಲೇ ಕ್ಷೇತ್ರಗಳಲ್ಲಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ. ಕೆಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಾಗಿದೆ. ಆದರೆ, ನಾವು ಹೇಳಿದವರೇ ಅಂತಿಮವಲ್ಲ.
ಕೊನೆ ಕ್ಷಣದಲ್ಲಿ ಅಭ್ಯರ್ಥಿ ಬದಲಾಗಬಹುದು ಎಂಬುದನ್ನು ಈಗಾಗಲೇ ನಮ್ಮ ನಾಯಕರಾದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ಕೆಲಸ ಮಾಡಬೇಕು. ಮಾಗಡಿಯಿಂದ ಪಂಚರತ್ನ ರಥಯಾತ್ರೆ ಮತ್ತೆ ಆರಂಭ ಮಾಡುತ್ತಿದ್ದೇವೆ ಎಂದು ಇದೇ ವೇಳೆ ಸಿಎಂ ಇಬ್ರಾಹಿಂ ತಿಳಿಸಿದರು.
ಮಹಾಜನ್ ವರದಿಯೇ ಅಂತಿಮ: ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರ ಸಂಬಂಧ ಸಚಿವ ಸಮಿತಿ ರಚನೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಗಡಿ ಸಮಸ್ಯೆ ಈಗಾಗಲೇ ಮುಗಿದು ಹೋಗಿರುವ ವಿಚಾರ. ಸಭೆ ಅವಶ್ಯಕತೆ ಇರಲಿಲ್ಲ. ಸಮಿತಿ ಸಹ ಬೇಕಿರಲಿಲ್ಲ. ಮಹಾಜನ್ ವರದಿಯೇ ಅಂತಿಮ. ಕನ್ನಡಿಗರು ಮರಾಠಿಗರು ಸಹೋದರರಂತೆ ಬಾಳುತ್ತಿದ್ದಾರೆ. ಬಿಜೆಪಿ ಭಾವನಾತ್ಮಕ ವಿಚಾರಗಳನ್ನು ಕೆರಳಿಸುತ್ತಿದ್ದು, ಚುನಾವಣೆಗಾಗಿ ಸಮಿತಿ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.