ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಮಿಕ್ರಾನ್ ಇಲ್ಲ, ಕೆಲವೆಡೆ ಇದೆ. ಹೀಗಾಗಿ ಬರುವಂತಹ ಎರಡು ತಿಂಗಳ ಕಾಲ ಕೋವಿಡ್ ನಿಯಂತ್ರಣದ ಬಗ್ಗೆ ಇಂದು ಅಧಿಕಾರಿಗಳ ಜೊತೆ ಅನೌಪಚಾರಿಕ ಸಭೆ ನಡೆಸಿ ವಿವರ ಪಡೆದು ನಾಳಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಒಮಿಕ್ರಾನ್ ಹಾಗೂ ಕ್ಲಸ್ಟರ್ಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸುವ ಬಗ್ಗೆಯೂ ಚರ್ಚಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರ್.ಟಿ.ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತಳಿ ಒಮಿಕ್ರಾನ್ ಮತ್ತು ಕ್ಲಸ್ಟರ್ ಆಗುತ್ತಿರುವ ಬಗ್ಗೆ ಯಾವ ಮಾರ್ಗಸೂಚಿ ಕೊಡಬೇಕು ಎನ್ನುವ ಕುರಿತು ಎಲ್ಲರಿಗೂ ಮಾಹಿತಿ ಕೊಟ್ಟು ಒಂದು ತೀರ್ಮಾನ ಮಾಡಲಿದ್ದೇವೆ. ಅದಕ್ಕಾಗಿ ಈಗ ನವಂಬರ್ ತಿಂಗಳಲ್ಲಿನ ಸಂಪೂರ್ಣವಾದ ಕೋವಿಡ್ ಸ್ಥಿತಿಗತಿ ಸೇರಿದಂತೆ ಎಲ್ಲ ಮಾಹಿತಿಯನ್ನು ಅನೌಪಚಾರಿಕವಾಗಿ ಅಧಿಕಾರಿಗಳಿಂದ ಪಡೆಯಲಿದ್ದೇನೆ. ಇವತ್ತಿನ ಸ್ಥಿತಿಗತಿ ನೋಡಿ ನಾಳಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದರು.
ಹೊಸ ಮಾರ್ಗಸೂಚಿ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಕೆಲವು ಜಿಲ್ಲೆಗಳಲ್ಲಿ ಮಾತ್ರ ಸೋಂಕು ಹೆಚ್ಚಾಗಿದೆ ಇನ್ನೂ ಕೆಲವು ಜಿಲ್ಲೆಗಳಲ್ಲಿ ನಿಯಂತ್ರಣದಲ್ಲಿದೆ. ಹಾಗಾಗಿ ಏನೇ ಮಾಡಬೇಕು ಅಂದರೂ ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಮಾಡಬೇಕಿದೆ. ಜೊತೆಗೆ, ಕೇಂದ್ರವೂ ಹಲವಾರು ಮಾರ್ಗಸೂಚಿಗಳನ್ನು ಕಳುಹಿಸಿದೆ. ಅವುಗಳೆಲ್ಲವನ್ನೂ ಪರಾಮರ್ಶಿಸಿ ಜನವರಿವರೆಗೆ ನಿಯಂತ್ರಣ ಮಾಡಲು ಮಾರ್ಗಸೂಚಿ ಹೊರಡಿಸುತ್ತೇವೆ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸಿ, ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಯಾರೂ ಆತಂಕ ಪಡುವ ಸ್ಥಿತಿ ಇಲ್ಲ, ಅದರ ಅಗತ್ಯವೂ ಇಲ್ಲ. ಪೋಷಕರು ಕೂಡ ಆತಂಕಪಡಬಾರದು, ಮಕ್ಕಳನ್ನು ಜಾಗೃತರಾಗಿ ನೋಡಿಕೊಳ್ಳಬೇಕು. ಶಾಲೆಯಲ್ಲಿ ಸ್ವಚ್ಛತೆ ಹಾಗೂ ಶಾಲೆಯಲ್ಲಿ ಕೋವಿಡ್ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ವಸತಿ ಶಾಲೆಯಲ್ಲಿ ಕೋವಿಡ್ ಪರಿಸ್ಥಿತಿ ಬಗ್ಗೆ ವಿವರ ಪಡೆಯುತ್ತೇವೆ. ಶಾಲೆ, ಹಾಸ್ಟೆಲ್ ಎಲ್ಲವನ್ನೂ ಒಳಗೊಂಡಂತೆ ಅವುಗಳಿಗೆ ಅನ್ವಯವಾಗುವಂತೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ವಿವರಿಸಿದರು.