ಕರ್ನಾಟಕ

karnataka

ETV Bharat / state

ಅಧಿಕಾರ ವಿಕೇಂದ್ರೀಕರಣ, ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದವರು ರಾಜೀವ್ ಗಾಂಧಿ: ಸಿಎಂ ಸಿದ್ದರಾಮಯ್ಯ

ಗಾಂಧೀಜಿ ಮತ್ತು ಕಾಂಗ್ರೆಸ್​ ಪಕ್ಷದ ಕನಸಾಗಿದ್ದ ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಗೆ ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಮುನ್ನುಡಿ ಬರೆದರು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ
ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ

By ETV Bharat Karnataka Team

Published : Oct 2, 2023, 5:40 PM IST

ಬೆಂಗಳೂರು : ಮಹಾತ್ಮ ಗಾಂಧಿ ಅವರ ಕನಸಿನ ಅಧಿಕಾರ ವಿಕೇಂದ್ರೀಕರಣ ಮತ್ತು ಮಹಿಳಾ ಮೀಸಲಾತಿಗೆ ಮುನ್ನುಡಿ ಬರೆದವರು ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿಂದು 2023ನೇ ಸಾಲಿನ 'ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ' ಪ್ರದಾನ ಸಮಾರಂಭ ಹಾಗೂ ಸ್ವಚ್ಚ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು.

ಈ ಕಾರ್ಯಕ್ರಮ ಉದ್ಘಾಟಿಸಿ, ಪ್ರಶಸ್ತಿ ವಿತರಿಸಿ ಮಾತನಾಡಿದ ಸಿಎಂ, "ಅಧಿಕಾರ ವಿಕೇಂದ್ರೀಕರಣ ಗಾಂಧಿಯವರ ಕನಸಾಗಿತ್ತು. ಇದರಿಂದ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ. ದೇಶ, ರಾಜ್ಯದ ಅಭಿವೃದ್ಧಿ ಸಾಧ್ಯ ಎಂದು ನಂಬಿದ್ದರು. ಹೀಗಾಗಿ ಗ್ರಾಮ ಸ್ವರಾಜ್ಯವನ್ನು ಅವರು ಪ್ರತಿಪಾದಿಸಿದರು. ಗ್ರಾಮಗಳ ಅಭಿವೃದ್ದಿ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎನ್ನುವುದು ಗಾಂಧೀಜಿ ನೀತಿಯಾಗಿತ್ತು" ಎಂದು ವಿವರಿಸಿದರು.

"ಜನತಂತ್ರದ ವಿಕೇಂದ್ರೀಕರಣಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತಂದವರು ರಾಜೀವ್ ಗಾಂಧಿ ಮತ್ತು ಇದನ್ನು ಜಾರಿ ಮಾಡಿದವರೂ ಕೂಡಾ ಅವರೇ. ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್‌ಗಳಲ್ಲಿ ಶೇ 50 ಮೀಸಲಾತಿ ಜಾರಿಗೆ ಕಾರಣಕರ್ತರು ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್. ಈಗ ಕೇಂದ್ರ ಸರ್ಕಾರ ಜಾರಿ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮಹಿಳೆಯರ ರಾಜಕೀಯ ಮೀಸಲಾತಿಗೆ ಮುನ್ನುಡಿ ಬರೆದದ್ದು ಕೂಡಾ ಕಾಂಗ್ರೆಸ್. ಈಗ ಹಿಂದುಳಿದ ವರ್ಗಗಳ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಬೇಕು ಎನ್ನುವುದು ನಮ್ಮ ಒತ್ತಾಯ" ಎಂದು ಸಿದ್ದರಾಮಯ್ಯ ಹೇಳಿದರು.

ಶೀಘ್ರದಲ್ಲೇ ಗ್ರಾಮ ನ್ಯಾಯಾಲಯಗಳ ಸ್ಥಾಪನೆ:ಗ್ರಾಮಗಳ ವ್ಯಾಜ್ಯಗಳು ಗ್ರಾಮಗಳಲ್ಲೇ ಬಗೆಹರಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿಂದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಹಾತ್ಮ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣದ ಆಶಯದಂತೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾದರೆ ಗ್ರಾಮಸ್ಥರಿಗೆ ಬಹಳ ಅನುಕೂಲ ಆಗುತ್ತದೆ. ಅಲ್ಲದೆ, ಖಾದಿ-ಗ್ರಾಮೋದ್ಯೋಗ ಸ್ಥಳಗಳನ್ನು ಅಭಿವೃದ್ಧಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಭರವಸೆ ನೀಡಿದರು.

233 ಗ್ರಾ.ಪಂ.ಗೆ ಗಾಂಧಿ ಗ್ರಾಮ ಪುರಸ್ಕಾರ:ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಪ್ರತಿ ವರ್ಷ ಗಾಂಧಿ ಜಯಂತಿ ದಿನದಂದು ನೀಡುವ 'ಗಾಂಧಿ ಗ್ರಾಮ ಪುರಸ್ಕಾರ'ವನ್ನು 233 ಗ್ರಾಮ ಪಂಚಾಯಿತಿಗಳಿಗೆ, 4 ಗ್ರಾಮ ಪಂಚಾಯಿತಿಗಳಿಗೆ ವಿಶೇಷ 'ಗಾಂಧಿ ಗ್ರಾಮ ಪುರಸ್ಕಾರ ಹಾಗೂ 15 ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ 2023 ರಾಜ್ಯ ಮಟ್ಟದ ಪ್ರಶಸ್ತಿಯನ್ನು ಸಿಎಂ ಸಿದ್ದರಾಮಯ್ಯ ವಿತರಿಸಿದರು.

'ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ 5 ರೂ. ಲಕ್ಷ ಪ್ರೋತ್ಸಾಹಧನ ನೀಡಿ ಗೌರವಿಸಲಾಯಿತು. 2020-2021 ಮತ್ತು 2021-22ನೆ ಸಾಲಿನಲ್ಲಿ ಸತತವಾಗಿ 'ಗಾಂಧಿ ಗ್ರಾಮ ಪುರಸ್ಕಾರ'ಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು 2022-23ನೇ ಸಾಲಿನ ಪರಿಶೀಲನೆಯಲ್ಲಿ ಪುನಃ ಮೊದಲನೇ ಸ್ಥಾನ ಪಡೆದ ಗ್ರಾಮ ಪಂಚಾಯಿತಿಗಳಿಗೆ ವಿಶೇಷ 'ಗಾಂಧಿ ಗ್ರಾಮ ಪುರಸ್ಕಾರ' ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದ ರಾಜು, ನಸೀರ್ ಅಹ್ಮದ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

ಇದನ್ನೂ ಓದಿ:ಗಾಂಧಿ ಅವಹೇಳನಕ್ಕೆ ಅವಕಾಶ ನೀಡಲ್ಲ, ಅವಹೇಳನ ಮಾಡಿದಲ್ಲಿ ಕ್ರಮ: ಸಿದ್ದರಾಮಯ್ಯ ಎಚ್ಚರಿಕೆ..!

ABOUT THE AUTHOR

...view details