ಬೆಂಗಳೂರು: ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಬಿಎಂಪಿಯ 2020-2021 ನೇ ಸಾಲಿನ ಬಜೆಟ್ ಮೇಲಿನ ಚರ್ಚೆ ನಡೆಸಿತು. ಈ ವೇಳೆ ಹಲವಾರು ಸಲಹೆಗಳನ್ನು ಪಾಲಿಕೆ ಸದಸ್ಯರು ನೀಡಿದರು.
10 ಸಾವಿರ ಲೀಟರ್ ಉಚಿತ ನೀರಿನ ಯೋಜನೆಯನ್ನು 15 ಸಾವಿರಕ್ಕೆ ಏರಿಸುವ ಬಗ್ಗೆ, ಹಾಗೆಯೇ ಕೊರೊನಾ ತುರ್ತು ಪರಿಸ್ಥಿತಿ ಎದುರಿಸಲು ವಾರ್ಡ್ ಅನುದಾನದಲ್ಲಿ 20 ಲಕ್ಷ ರೂ. ಕಾರ್ಪೋರೇಟರ್ ವಿವೇಚನೆಗೆ ಬಿಡುವ ಬಗ್ಗೆ ಸದಸ್ಯರು ಸಲಹೆ ನೀಡಿದರು. ಈ ಎಲ್ಲ ಅಂಶಗಳನ್ನು ಒಪ್ಪಿ, ಕೆಲವು ಮಾರ್ಪಾಡಿನೊಂದಿಗೆ 20-21 ನೇ ಸಾಲಿನ ಪಾಲಿಕೆ ಬಜೆಟ್ಗೆ ಅನುಮೋದನೆ ನೀಡಲಾಗಿದ್ದು, ರಾಜ್ಯ ಸರ್ಕಾರಕ್ಕೆ ಕಳುಹಿಸಲು ನಿರ್ಣಯ ಕೈಗೊಳ್ಳಲಾಗಿದೆ.
ಈ ವೇಳೆ ಮಾತನಾಡಿದ ಆಯುಕ್ತರಾದ ಬಿ.ಹೆಚ್ ಅನಿಲ್ ಕುಮಾರ್, ರಾಜ್ಯ ಹಾಗೂ ಬಿಬಿಎಂಪಿಯ ಮುಂಜಾಗ್ರತೆ ಕ್ರಮದಿಂದ ಕೋವಿಡ್ ನಿಯಂತ್ರಣದಲ್ಲಿದೆ. ಮಾರ್ಚ್ ಹತ್ತರಿಂದಲೇ ರಾಜ್ಯ ಸರ್ಕಾರವೂ ಎಚ್ಚೆತ್ತುಕೊಂಡಿತ್ತು. ಬಿಬಿಎಂಪಿ ವತಿಯಿಂದ ಯಾವುದೇ ನಗರ ಪ್ರದೇಶ ತೆಗೆದುಕೊಳ್ಳಬೇಕಾದ ಕ್ರಮಕ್ಕಿಂತ ಮುಂಚೆನೇ ಕ್ರಮ ತೆಗೆದುಕೊಂಡು, ಬೇರೆ ನಗರಗಳಿಗೆ ಮಾದರಿಯಾಗಿದ್ದೇವೆ ಎಂದರು.
22 ಸಾವಿರ ಜನರನ್ನು ಹೋಂ ಕ್ವಾರಂಟೈನ್ ಮಾಡಿ, ಸೋಂಕು ಮುಕ್ತರಾಗಿಸುವಲ್ಲಿ ಆರೋಗ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯಿಂದ ಇದು ಯಶಸ್ವಿಯಾಗಿದೆ. ಶುಚಿತ್ವ ಕಾಪಾಡಲು ಪ್ರತೀ ವಾರ್ಡ್ಗೆ ಯಂತ್ರೋಪಕರಣ ಕೊಟ್ಟು, ಅಗತ್ಯ ಸಲಕರಣೆ ನೀಡಲಾಗಿದೆ. ಎಲ್ಲ ವಾರ್ಡ್ಗಳ ಜನಸಾಂದ್ರತೆ ಪ್ರದೇಶ, ಸ್ಲಂ, ಬಸ್ ನಿಲ್ದಾಣ, ಆಸ್ಪತ್ರೆ, ಪಿ.ಕೆ. ಕಾಲೊನಿಗಳಲ್ಲಿ ಪ್ರತಿನಿತ್ಯ ಪರೀಕ್ಷೆ ಮಾಡಲಾಗುತ್ತಿದೆ.
2020-2021 ನೇ ಸಾಲಿನ ಬಜೆಟ್ ಮೇಲಿನ ಚರ್ಚೆ ಜಲಮಂಡಳಿ 30 ಹೊಸ ಜೆಟ್ಟಿಂಗ್ ಮಷಿನ್, ಅಗ್ನಿ ಶಾಮಕದಳದವರು 10 ಫೈರ್ ಇಂಜಿನ್ ಒದಗಿಸಿಕೊಟ್ಟಿದ್ದಾರೆ. ಹೋಟೆಲ್ಗಳನ್ನು ಗುರುತಿಸಿ, ಪ್ರೈಮರಿ ಹಾಗೂ ಸೆಕೆಂಡರಿ ಸಂಪರ್ಕದ ಜನರನ್ನು ಕ್ವಾರಂಟೈನ್ ಮಾಡಲಾಯಿತು. ನಿಜಾಮುದ್ಧೀನ್ನಿಂದ ಬಂದವರನ್ನು ಹಜ್ ಭವನದಲ್ಲಿರಿಸಿ, ಅಲ್ಲಿಂದ ಬಂದವರಲ್ಲಿ ಬಹುತೇಕ ಜನರು ಸೋಂಕು ಮುಕ್ತರಾದರು. ಸೋಂಕು ಕಂಡುಬಂದವರನ್ನು ಐಸೋಲೇಷನ್ ಆಸ್ಪತ್ರೆಗೆ ಕಳುಹಿಸಲಾಯಿತು. ಪಾದರಾಯನಪುರ, ಬಾಪೂಜಿನಗರವನ್ನು ಸೀಲ್ಡೌನ್ ಮಾಡಲಾಯಿತು. ಅಲ್ಲಿದ್ದ ಸೆಕೆಂಡರಿ ಸಂಪರ್ಕದ ಜನರನ್ನೂ ಕ್ವಾರಂಟೈನ್ ಮಾಡಲಾಯಿತು. ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಹಬ್ಬುವುದನ್ನು ಕಡಿಮೆ ಮಾಡಲಾಗಿದೆ ಎಂದರು.
ಬೆಂಗಳೂರಲ್ಲಿ ಸುಮಾರು 3.50 ಲಕ್ಷ ವಲಸೆ ಕಾರ್ಮಿಕರಿದ್ದು, ಎಲ್ಲರಿಗೂ ಆಹಾರ ಒದಗಿಸುವ ಕೆಲಸ ಹಂತಹಂತವಾಗಿ ಮಾಡಲಾಗುತ್ತಿದೆ. ಇಲ್ಲಿ ಒಡಿಶಾದಿಂದಲೇ ಬಂದ 26,000 ವಲಸೆ ಕಾರ್ಮಿಕರಿದಾರೆ. ಪಶ್ಚಿಮ ಬಂಗಾಳ, ಜಾರ್ಖಾಂಡ್, ರಾಜಸ್ಥಾನಗಳಿಂದಲೂ ಸೇರಿ 3.50 ಲಕ್ಷ ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇನ್ನು ವೃತ್ತಿ ಕೌಶಲ್ಯವಿರುವ ಕಾರ್ಮಿಕರು ಕೂಡಾ ಈಗ ಕೆಲಸ ಕಳೆದುಕೊಂಡಿದ್ದು ಇವರಿಗೂ ಆಹಾರ ಕೊಡುವ ಸವಾಲು ನಮ್ಮ ಮುಂದೆ ಇದೆ ಎಂದರು.
ಪಾಲಿಕೆಯಿಂದ ಒಟ್ಟು 1.58 ಲಕ್ಷ ಆಹಾರ ಕಿಟ್ ಮಾಡಲು ಆದೇಶ ಮಾಡಲಾಗಿದ್ದು ತ್ವರಿತವಾಗಿ ಪ್ಯಾಕ್ ಮಾಡಲು, ಪ್ರತಿವಲಯಕ್ಕೂ ಅನುಮತಿ ಕೊಡಲಾಗಿದೆ. ರಾಜ್ಯ ಸರ್ಕಾರ ಕೂಡಾ ಈವರೆಗೆ 45 ಲಕ್ಷ ಲೀ. ಕೆಎಂಎಫ್ ಮುಖಾಂತರ ಹಾಲಿನ ಹಂಚಿಕೆ ಮಾಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದರು.
ಅಧಿಕಾರಿ-ನೌಕರರಿಗೆ ಆರೋಗ್ಯ ವಿಮೆ, ಉಚಿತ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯುತ್ತಿರುವುದರಿಂದ ಸಹಾಯವಾಗಿದೆ. ಇನ್ನು ಪೌರಕಾರ್ಮಿಕರಿಗೂ ಅರ್ಧ ದಿನದ ಕೆಲಸ, ಓಡಾಟಕ್ಕೆ ಬಸ್ ವ್ಯವಸ್ಥೆ ಮಾಡಲಾಗಿದೆ. ದೆಹಲಿ ಮಾದರಿಯಲ್ಲಿ ಪಾಲಿಕೆ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ತೆರೆಯಲಾಗುವುದು ಎಂದರು.
ಇನ್ನು ಇದೇ ವೇಳೆ, ಮಾಜಿ ಮೇಯರ್ ಸಂಪತ್ ಕುಮಾರ್, ಕೋವಿಡ್ ಕ್ರೈಸಿಸ್ನಲ್ಲಿ ಎಷ್ಟು ಜನರಿಗೆ ಟೆಸ್ಟ್ ಮಾಡಿದ್ದೇವೆ? ನಾವ್ಯಾಕೆ ಒಂದು ಮೆಡಿಕಲ್ ಮೀಟಿಂಗ್ ಮಾಡ್ಬಾರ್ದು? ಮೇ 3 ಅನ್ನೋದು ಫೈನಲ್ ಅಲ್ಲ. ಸೋಂಕಿನ ಲಕ್ಷಣ ಇಲ್ಲದೇ ಸೋಂಕು ಬರ್ತಿದೆ. ಬಜೆಟ್ ಪುಸ್ತಕದಲ್ಲಿ ಮೆಡಿಕಲ್ ಬಜೆಟ್ ಇರ್ಬೇಕಿತ್ತು, ಟೆಸ್ಟಿಂಗ್ ಕಿಟ್, ಒರಿಜಿನಲ್ ಮಾಸ್ಕ್, ಪಿಪಿಪಿ ಕಿಟ್ಗಳನ್ನು ಪಾಲಿಕೆ ಆಸ್ಪತ್ರೆಯಲ್ಲಿ ಕೊಡಿ. ವೆಂಟಿಲೇಟರ್ ಖರೀದಿಸಲು ಹಣ ಎಲ್ಲಿದೆ? ಹಾಗೆಯೇ ಕೋವಿಡ್ ಗುಣಮುಖರಾದವರಿಗೆ ಪ್ಲಾಸ್ಮಾ ಟೆಸ್ಟ್ ಮಾಡಿಸಲು ಕ್ರಮಕೈಗೊಳ್ಳಬೇಕು. ಈ ಎಲ್ಲಾ ಬಗ್ಗೆ ಬಜೆಟ್ನ ತಿದ್ದುಪಡಿಯಲ್ಲಿ ಗಮನವಹಿಸಬೇಕಿದೆ ಎಂದರು.