ಬೆಂಗಳೂರು:ಮತಾಂತರವನ್ನು ಕಾನೂನು ಬದ್ಧವಾಗಿ ಮಾಡಲಿ ಎಂದು ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕವನ್ನು ತರುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ವಿಧಾನ ಪರಿಷತ್ನಲ್ಲಿಇಂದು ಮಂಡಿಸಲಾದ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕದ ಬಗ್ಗೆ ಮಾತನಾಡಿದ ಅವರು, ಸಂವಿಧಾನದ ಪ್ರಕಾರವೇ ಮತಾಂತರ ನಿಷೇಧ ಕಾಯ್ದೆ ಇರಲಿದೆ. ಮೂಲಭೂತ ಹಕ್ಕಿಗೆ ಚ್ಯುತಿ ತರುತ್ತಿಲ್ಲ. ಮತಾಂತರ ಮಾಡಬೇಡಿ ಎಂದು ಎಲ್ಲಿಯೂ ಹೇಳುತ್ತಿಲ್ಲ. ಆದರೆ, ಒತ್ತಾಯ, ಬಲವಂತ ಎನ್ನುವುದಷ್ಟೇ ಇದೆ. ಈಗಾಗಲೇ ಕೆಲ ರಾಜ್ಯಗಳಲ್ಲಿ ಈ ಕಾಯ್ದೆ ತರಲಾಗಿದೆ. ಸಂವಿಧಾನದ ಆರ್ಟಿಕಲ್ 25ರ ಉಲ್ಲಂಘನೆ ಮಾಡುವ ಅಂಶ ಕಾನೂನಿನಲ್ಲಿ ಇಲ್ಲ. ಕೋರ್ಟ್ನಲ್ಲಿ ಪ್ರಶ್ನಿಸಿದ ನಂತರವೂ ಕಾನೂನು ಜಾರಿಯಾಗಿದೆ ಎಂದರು.
ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆ:ಧರ್ಮಾಧಾರಿತ ಯುದ್ಧಗಳಿಂದ ಎಷ್ಟು ಸಾವು ನೋವುಗಳಾಗಿವೆ ಎನ್ನುವುದು ಇತಿಹಾಸದ ಪುಟದಲ್ಲಿದೆ. ಹಾಗಾಗಿ ನಾವು ಅಂತಹ ಘಟನೆಗಳಾಗಬಾರದು ಎಂದು ವಿಧೇಯಕ ತರುತ್ತಿದ್ದೇವೆ. ಇಂದು ಧರ್ಮವನ್ನು ಅದರ ಪಾಡಿಗೆ ಅದನ್ನು ಬಿಟ್ಟರೆ ಶಾಂತಿ, ಪ್ರೀತಿ ವಿಶ್ವಾಸ ಎಂದು ಬೋಧಿಸುತ್ತಾರೆ. ಆದರೆ ಇಂದು ಧರ್ಮದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆ, ಧರ್ಮದ ಹೆಸರಿನಲ್ಲಿ ಅಧರ್ಮ ಮಾಡಲಾಗುತ್ತಿದೆ ಎಂದು ಹೇಳಿದರು.
ಒಂದು ಧರ್ಮದಲ್ಲೇ ತೀವ್ರತೆಯಿಂದ ಧರ್ಮದ ಹೆಸರಿನಲ್ಲಿ ಭಯೋತ್ಪಾದಕರಾಗುತ್ತಿದ್ದಾರೆ. ಇವೆಲ್ಲದರ ಒಟ್ಟು ಪರಿಣಾಮ ಸಮಾಜದಲ್ಲಿ ಅಪನಂಬಿಕೆ ಬರಲಿದೆ. ಹಾಗಾಗಿ ಮತಾಂತರ ಕಾನೂನು ಬದ್ಧವಾಗಿ ಮಾಡಲಿ ಎಂದು ತರುತ್ತಿದ್ದೇವೆ. ನಮ್ಮಲ್ಲಿ ಪ್ರೀತಿ ಮತ್ತು ದ್ವೇಷ ಎರಡೂ ಭಾವನೆ ಇದ್ದೇ ಇರಲಿದೆ. ಸಾಧಕರು ಸಾವಿನ ನಂತರವೂ ಬದುಕಿದ್ದರೆ ಅವರು ರೆಬೆಲ್ಸ್, ಅವರು ರಾಜಿಯಾಗಲ್ಲ. ಏಕಾಗ್ರತೆಯಿಂದ ಇರುತ್ತಾರೆ ಎಂದು ಸಿಎಂ ಬೊಮ್ಮಾಯಿ ಸಮರ್ಥಿಸಿಕೊಂಡರು.
ಮತಾಂತರದ ಬಗ್ಗೆ ಎಷ್ಟು ದೂರುಗಳು ದಾಖಲಾಗಿವೆ..?ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, ಮತಾಂತರ ಬಿಲ್ ಸಂವಿಧಾನದ ಆಶಯಗಳ ಬಗ್ಗೆ ಇದೆ. ದುರ್ಬಲ ವರ್ಗದವರು ಮತಾಂತರದಿಂದ ಗೌರವಯುತವಾಗಿ ಬದುಕಬಹುದು ಎಂದು ಅಂಬೇಡ್ಕರ್ ಹೇಳಿದ್ದರು. ಇದು ಸಂವಿಧಾನದ ವಿಷಯ, ವಿಧಾನಸಭೆ, ವಿಧಾನ ಪರಿಷತ್ಗೆ ಸಂವಿಧಾನ ತಿದ್ದುಪಡಿ ಅಧಿಕಾರವಿಲ್ಲ. ಲೋಕಸಭೆಯಲ್ಲಿ ಮೂರನೇ ಎರಡರಷ್ಟು ಬಹುಮತದ ಆಧಾರದಲ್ಲಿ ಇದಕ್ಕೆ ಅಂಗೀಕಾರ ಬೇಕು. ಒತ್ತಾಯದಿಂದ ಮತಾಂತರ ಸಾಧ್ಯವಿಲ್ಲ. ಹಾಗಾದಲ್ಲಿ ಎಷ್ಟು ದೂರು ದಾಖಲಾಗಿವೆ ಹೇಳಿ ಎಂದರು.
ಅಲ್ಲದೇ, ತಿದ್ದುಪಡಿ ವಿಧೇಯಕ್ಕೆ ನಮ್ಮ ತಕರಾರಿದೆ. ಪ್ರೀತಿ ಹುಟ್ಟಿನ ಜೊತೆ ಬರಲಿದೆ. ದ್ವೇಷ ಬೇರೋಬ್ಬರ ಪ್ರೇರೇಪಣೆಯಿಂದ ಬರಲಿದೆ. ಭಾರತದ ಸಂವಿಧಾನ ಯಾವುದೇ ಗ್ರಂಥಗಳ ವಿರೋಧಿಯಲ್ಲ. ಈ ನೆಲೆದ ಮಾನವೀಯ ಗುಣಗಳ ಮೌಲ್ಯವನ್ನು ಹೊಂದಿದ ಸಂವಿಧಾನವಾಗಿದೆ. ಮೊಘಲರು 27 ವರ್ಷ ಆಳ್ವಿಕೆ ಮಾಡಿದಾಗ ಎಲ್ಲರನ್ನು ಮತಾಂತರ ಮಾಡಬಹುದಿತ್ತಲ್ಲ?. ಬ್ರಿಟಿಷರು 200 ವರ್ಷ ಆಳ್ವಿಕೆ ಮಾಡಿದಾಗ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡಬಹುದಿತ್ತಲ್ಲ ಎಂದು ವಿಧೇಯಕವನ್ನು ವಿರೋಧಿಸಿದರು.
ದಲಿತರು ಆಮಿಷಕ್ಕೆ ಒಳಗಾಗಿ ಮತಾಂತರವಾಗಿ ಆ ಧರ್ಮದಲ್ಲೂ ಅನುಕೂಲ ಪಡೆದು ಇಲ್ಲಿಯೂ ಸವಲತ್ತು ಪಡೆದುಕೊಳ್ಳುತ್ತಾರೆ ಎಂದು ಗೃಹ ಸಚಿವರು ಹೇಳಿದ್ದಾರೆ. ಎಸ್ಸಿ ಎಸ್ಟಿ ಮೇಲೆ ನಿರಂತರ ದಬ್ಬಾಳಿಕೆಯಿಂದ ಅವರು ಧರ್ಮ ಬಿಟ್ಟು ಹೋಗಲೇಬೇಕಲ್ಲವೇ ಎಂದು ಪ್ರಶ್ನಿಸಿ, ಬಸವಣ್ಣನ ಧರ್ಮ ಪ್ರಚಾರ ವಿಚಾರವನ್ನು ಪ್ರಸ್ತಾಪಿಸಿದರು.
ಯಾವ ಧರ್ಮದಲ್ಲಿ ಕಟ್ಟುಪಾಡು ಇಲ್ಲ..?ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಸಿಎಂ, ನಾವೂ ಬಸವಣ್ಣನವರ ತತ್ವವನ್ನೇ ಅನುಸರಿಸುತ್ತಿದ್ದೇವೆ. ನಾವು ಮತಾಂತರ ನಿಷೇಧ ಮಾಡುತ್ತಿಲ್ಲ. 12ನೇ ಶತಮಾನದಲ್ಲಿ ಯಾವ ಆಮಿಷ ಇಲ್ಲದೆ ಮತಾಂತರ ಆಯಿತು. ಅದೇ ರೀತಿ ಆಗಲಿ ಎನ್ನುವುದೇ ನಮ್ಮ ಬಯಕೆ, ಯಾವ ಧರ್ಮದಲ್ಲಿ ಕಟ್ಟುಪಾಡು ಇಲ್ಲ ಹೇಳಿ?. ಈಗ 21 ನೇ ಶತಮಾನದಲ್ಲಿ ಬಹಳಷ್ಟ ಸುಧಾರಣೆ ಬರುತ್ತಿದೆ. ಬಸವಣ್ಣ ಪ್ರಸ್ತುತ ಎಂದರೆ ಅಸಮಾನತೆ, ಅಸ್ಪೃಶ್ಯತೆ ಇದೆ ಎಂದೇ ಅರ್ಥ, ಹಿಂದಿನ ಸ್ಥಿತಿ ನಾವು ತಡೆ ಹಿಡಿಯುತ್ತಿಲ್ಲ. ಬಸವಣ್ಣನ ತತ್ವಕ್ಕೆ ನಾವು ವಿರೋಧಿಯಲ್ಲ ಎಂದರು.
ನಂತರ ಮಾತು ಮುಂದುವರೆಸಿದ ಹರಿಪ್ರಸಾದ್, ಮತಾಂತರ ಹೊಸದೇನಲ್ಲ, ಮೊದಲಿನಿಂದಲೂ ಇದೆ. ಅಸ್ಪೃಶ್ಯತೆ ಇತ್ಯಾದಿ ವಿರುದ್ಧದ ಹೋರಾಟ ಬಸವಣ್ಣನ ಹೋರಾಟವೇ ಹೊರತು ಬೊಮ್ಮಾಯಿ ಹೋರಾಟವಲ್ಲ. ನಮ್ಮದು ಸಂವಿಧಾನ ಬಗ್ಗೆ ಹೋರಾಟ. ಆದರೆ, ಇದಕ್ಕೆ ಪ್ರತಿಯಾಗಿ ನೀವು ಅಂಬೇಡ್ಕರ್ ಮೊಮ್ಮಗನನ್ನು ಮೂರು ವರ್ಷ ಜೈಲಿನಲ್ಲಿಟ್ಟಿದ್ದೀರಿ ಎಂದು ಆರೋಪಿಸಿದರು.