ಬೆಂಗಳೂರು: ಮೋಡ ಬಿತ್ತನೆ ತಂತ್ರಜ್ಞಾನದ ಕುರಿತು ಆಡಳಿತ ಪಕ್ಷದ ಶಾಸಕರಿಬ್ಬರ ನಡುವೆ ಚರ್ಚೆ ನಡೆದು ಪರ- ವಿರೋಧ ವಕ್ತವಾದ ಪ್ರಸಂಗ ವಿಧಾನಸಭೆಯಲ್ಲಿ ಇಂದು ನಡೆಯಿತು. 2023-24ನೇ ಸಾಲಿನ ಬಜೆಟ್ ಅಂದಾಜುಗಳ ಮೇಲೆ ಸಾಮಾನ್ಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ವೇಳೆ ಕಾಂಗ್ರೆಸ್ ಶಾಸಕ ಪ್ರಕಾಶ್ ಕೋಳಿವಾಡ್ ಅವರು ಮೋಡ ಬಿತ್ತನೆ ಸರಿಯಾದ ತಂತ್ರಜ್ಞಾನ. ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಕೇಂದ್ರ ಸರ್ಕಾರ ಸಹ ಮೋಡ ಬಿತ್ತನೆಯನ್ನು ಬಳಕೆ ಮಾಡಿಕೊಂಡಿದೆ ಎಂದರು.
ಪ್ರಧಾನಿಯವರು ಸಹ ಈ ತಂತ್ರಜ್ಞಾನದ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮೋಡ ಬಿತ್ತನೆಯಲ್ಲಿ ನಿರಂತರ ಸಂಶೋಧನೆ ನಡೆಯುತ್ತಿದೆ. ಮೋಡ ಬಿತ್ತನೆ ಸರಿಯಿಲ್ಲ ಅನ್ನೋದಕ್ಕೆ ವಿರೋಧ ವ್ಯಕ್ತಪಡಿಸಿದರು. ಆದರೆ ಪ್ರಕಾಶ್ ಕೋಳಿವಾಡ್ ಅಭಿಪ್ರಾಯ ವಿರೋಧಿಸಿದ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್, ಇದು ಪರಿಸರಕ್ಕೆ ಮಾರಕ ತಂತ್ರಜ್ಞಾನ ಎಂಬ ವರದಿಯಿದೆ. ಇದು ಸೂಕ್ತ ತಂತ್ರಜ್ಞಾನ ಅಲ್ಲ ಎಂದರು. ಆಗ ಬಿ ಆರ್ ಪಾಟೀಲ್ ಅಭಿಪ್ರಾಯಕ್ಕೆ ಕೋಳಿವಾಡ್ ಆಕ್ಷೇಪ ವ್ಯಕ್ತಪಡಿಸಿದರು. ಆಗ ಚರ್ಚೆಗೆ ಅವಕಾಶ ಇಲ್ಲ ಎಂದು ಹೇಳಿ ಸ್ಪೀಕರ್ ಖಾದರ್ ಶಾಸಕರನ್ನು ಸುಮ್ಮನಾಗಿಸಿದರು.
ನಂತರ ಬಜೆಟ್ ಮೇಲಿನ ಚರ್ಚೆ ಮುಂದುವರೆದಿದ್ದು, ಆಡಳಿತ ಪಕ್ಷದ ಶಾಸಕ ಎ ಸಿ ಶ್ರೀನಿವಾಸ್ ಮಾತನಾಡಿ "ಇದೊಂದು ಉತ್ತಮ ಬಜೆಟಾಗಿದ್ದು, 5 ಗ್ಯಾರಂಟಿಗಳ ಅನುಷ್ಠಾನಕ್ಕೆ ಸಾಕಷ್ಟು ಅನುದಾನ ಒದಗಿಸಿರುವುದು ಸ್ವಾಗತಾರ್ಹ. ಗ್ಯಾರಂಟಿ ಯೋಜನೆಗಳನ್ನು ಪಕ್ಷಾತೀತವಾಗಿ ಸ್ವಾಗತಿಸಲಾಗುತ್ತಿದೆ" ಎಂದರು. ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಪುಲಕೇಶಿ ನಗರ ತೀರಾ ಹಿಂದುಳಿದಿದ್ದು, ಅಲ್ಪಸಂಖ್ಯಾತರು, ಬಡವರು ಹೆಚ್ಚಾಗಿದ್ದಾರೆ. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಉತ್ತಮವಾದ ಶಾಲಾ-ಕಾಲೇಜು ಸೌಲಭ್ಯಗಳಿಲ್ಲ, ಆಸ್ಪತ್ರೆಗಳಿಲ್ಲ. ಸರ್ಕಾರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಪದವಿ ಕಾಲೇಜನ್ನು ಮಂಜೂರು ಮಾಡಿಕೊಡಬೇಕು ಎಂದು ಕೋರಿದರು.
ಜೆಡಿಎಸ್ ಶಾಸಕ ಮಂಜುನಾಥ್ ಮಾತನಾಡಿ "ನಮ್ಮ ಹನೂರು ಕ್ಷೇತ್ರ ದೊಡ್ಡದು. ನೀರಾವರಿ ಸಮಸ್ಯೆ ಪರಿಹಾರಕ್ಕೆ ಒತ್ತು ನೀಡಬೇಕು. ಚಿರತೆ ದಾಳಿಯಿಂದ ಮಗುವೊಂದು ಮೃತಪಟ್ಟಿದ್ದು, ಇಂತಹ ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.