ಬೆಂಗಳೂರು:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2023-24ನೇ ಸಾಲಿನ ಬಜೆಟ್ ಕುರಿತು ವಿಧಾನಸಭೆಯಲ್ಲಿ ಇಂದು ಮಂಗಳವಾರ ನಡೆದ ಮುಂದುವರೆದ ಚರ್ಚೆಯಲ್ಲಿ ನೂತನ ಶಾಸಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿ ತಮ್ಮ ತಮ್ಮ ಕ್ಷೇತ್ರಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ಇನ್ನೊಂದೆಡೆ ಘೋಷಿಸಿರುವ ಗ್ಯಾರಂಟಿಗಳ ಸಮರ್ಪಕ ಅನುಷ್ಠಾನದ ಅಗತ್ಯತೆ ಕುರಿತು ಹಿರಿಯ ಶಾಸಕರು ಸದನದಲ್ಲಿ ಚರ್ಚೆ ನಡೆಸಿದರು. ಬಜೆಟ್ ಮೇಲೆ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಚರ್ಚೆ ಇಂದು ಸಹ ಮುಂದುವರೆದಿದ್ದು, ಮೊದಲಿಗೆ ನೂತನ ಶಾಸಕರಿಗೆ ಸಭಾಧ್ಯಕ್ಷ ಯು.ಟಿ. ಖಾದರ್ ಅವಕಾಶ ಮಾಡಿಕೊಟ್ಟರು. ಆರಂಭದಲ್ಲಿ ಮಾತನಾಡಿದ ಮಹೇಂದ್ರ ಕಲ್ಲಪ್ಪ ತಮ್ಮಣ್ಣನವರ್, ಕುಡಚಿ ಕ್ಷೇತ್ರದಲ್ಲಿ ಕುಂಟುತ್ತಾ ಸಾಗಿರುವ ಏತ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಿ ರೈತರ ಜಮೀನಿಗೆ ನೀರುಣಿಸಬೇಕು ಎಂದು ಒತ್ತಾಯಿಸಿದರು. ಕೆರೆ ತುಂಬುವ ಯೋಜನೆ ಸ್ಥಗಿತಗೊಂಡಿದ್ದು, ಪುನಃ ಈ ಯೋಜನೆಯನ್ನು ಮುಂದುವರೆಸಬೇಕು. ಕ್ಷೇತ್ರದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸಾಕಷ್ಟು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಜೆಡಿಎಸ್ ಶಾಸಕಿ ಕರೆಮ್ಮ ಮಾತನಾಡಿ, ''ತಾವು ಪ್ರತಿನಿಧಿಸುವ ದೇವದುರ್ಗ ಕ್ಷೇತ್ರವು ತೀರಾ ಹಿಂದುಳಿದಿದ್ದು, ಅಭಿವೃದ್ಧಿ ಯೋಜನೆಗಳಿಗೆ ಬಿಡುಗಡೆಯಾದ ಅನುದಾನವು ಸದ್ವಿನಿಯೋಗವಾಗುತ್ತಿಲ್ಲ. ಇದೊಂದು ರೀತಿ ಕನ್ನಡಿಯೊಳಗಿನ ಗಂಟಿನಂತಿದೆ ಎಂದರು. ಶಕ್ತಿ ಯೋಜನೆಯು ಮಹಿಳೆಯರಿಗೆ ವರದಾನವಾಗಿದೆ. ಆದರೂ ಹಳ‍್ಳಿಗಳಿಗೆ ಸಾಕಷ್ಟು ಸಂಖ್ಯೆಯ ಬಸ್ ಸೌಲಭ್ಯ ಇಲ್ಲವಾಗಿದೆ. ಬಸ್ ಸೌಲಭ್ಯ ಕಲ್ಪಿಸಿದರಷ್ಟೇ ಮಹಿಳೆಯರು ಒಂದೆಡೆಯಿಂದ ಮತ್ತೊಂದೆಡೆಗೆ ಹೋಗಿ ಬರಲು ಸಾಧ್ಯ. ಅದೇ ರೀತಿ ಶಾಲಾ ಮಕ್ಕಳಿಗೆ ಪ್ರತ್ಯೇಕ ಬಸ್ ಸೌಲಭ್ಯ ಕಲ್ಪಿಸಬೇಕು'' ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಹೆಚ್.ಕೆ. ಸುರೇಶ್ ಮಾತನಾಡಿ, ''ಆನೆ ಹಾವಳಿಯಿಂದ ತುಂಬಾ ತೊಂದರೆಯಾಗುತ್ತಿದೆ. ಇದರಿಂದ ಹೋಂ ಸ್ಟೇಗಳು ಬಾಗಿಲು ಮುಚ್ಚಿವೆ. ಕಾಫಿ ಬೆಳೆಗಾರರು ತೊಂದರೆ ಸಿಲುಕಿದ್ಧಾರೆ. ಆನೆ ಹಾವಳಿ ತಡೆಗೆ 120 ಕೋಟಿ ರೂ. ಅನುದಾನ ಒದಗಿಸಿರುವುದು ಸಾಲುವುದಿಲ್ಲ. ಕನಿಷ್ಠ 500 ಕೋಟಿ ರೂ. ಅನುದಾನ ನೀಡಬೇಕು'' ಎಂದು ಒತ್ತಾಯಿಸಿದರು.
ಕೆಆರ್ಎಸ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಲು ಹಾಸನ-ಚಿಕ್ಕಮಗಳೂರು ನಡುವೆ 40 ಎಕರೆ ಗುರುತಿಸಲಾಗಿದೆ. ಇದಕ್ಕೆ ಮೂರವರೆ ಕೋಟಿ ರೂ. ಅನುದಾನ ನೀಡಬೇಕು ಹಾಗೂ ಇದನ್ನು ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಕೋರಿದರು.
ಗ್ಯಾರಂಟಿ ಯೋಜನೆಗಳನ್ನು ಮಾಡುವವರೆಗೂ ಹೋರಾಟ: ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಮಾತನಾಡಿ, ''ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್‍ನಲ್ಲಿ ಸಂಪ್ರದಾಯ ಮುರಿದಿದ್ದಾರೆ. ಆರ್ಥಿಕ ಮುನ್ನೂಟಕ್ಕಿಂತ ರಾಜಕೀಯ ಹಿನ್ನೋಟವೇ ಹೆಚ್ಚಾಗಿದೆ. ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಲು ಷರತ್ತು ವಿಧಿಸಲಾಗಿದೆ. ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮಾಡುವವರೆಗೂ ಹೋರಾಟ ಮಾಡುತ್ತೇವೆ. ಈ ಬಜೆಟ್‍ನಲ್ಲಿ ಕೃಷಿ, ಸಾರಿಗೆ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಅನುದಾನ ಕಡಿತಗೊಳಿಸಲಾಗಿದೆ. ಮುಂದಿನ ಎರಡು ವರ್ಷ ಅಭಿವೃದ್ಧಿ ಆಗುವುದಿಲ್ಲ ಎಂದು ವಿಧಾನಸಭೆ ಮೊಗಸಾಲೆಯಲ್ಲಿ ಕಾಂಗ್ರೆಸ್ ಶಾಸಕರೇ ಮಾತನಾಡಿಕೊಳ‍್ಳುತ್ತಿದ್ದರು'' ಎಂದು ಹೇಳಿದರು. ಹುಬ್ಬಳ್ಳಿಗೆ ಈ ಬಜೆಟ್‍ನಲ್ಲಿ ವಿಶೇಷ ಮನ್ನಣೆ ನೀಡದೆ, ತಾರತಮ್ಯ ಮಾಡಲಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಮಾತನಾಡಿ, ''ಗ್ಯಾರಂಟಿ ಯೋಜನೆ ಜಾರಿ ಮಾಡುವಾಗ ಸರ್ಕಾರ ಯಡವಟ್ಟು ಮಾಡಿದೆ. ಮೊದಲು ಷರತ್ತಿಲ್ಲ ಎಂದು ಹೇಳಿ, ಅಧಿಕಾರಕ್ಕೆ ಬಂದ ಮೇಲೆ ಷರತ್ತು ಹಾಕಿದೆ. ಎಸ್‍ಸಿ, ಎಸ್‍ಟಿ ವಿದ್ಯಾರ್ಥಿ ನಿಲಯಗಳಿಗೆ ಹೆಚ್ಚಿನ ಅನುದಾನ ನೀಡಬೇಕು'' ಎಂದು ಆಗ್ರಹಿಸಿದರು.
ರಾಜ್ಯ ಬಜೆಟ್, ಆರ್ಥಿಕ ದಿವಾಳಿತನಕ್ಕೆ ದಾರಿ:ಬಿಜೆಪಿ ಶಾಸಕ ಚನ್ನಬಸಪ್ಪ ಮಾತನಾಡಿ, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸತತವಾಗಿ ಬಜೆಟ್ ಮಂಡನೆ ಮಾಡಿದವರು. ರಾಜ್ಯ ದುಃಸ‍್ಥಿತಿಗೆ ಕೊಂಡೊಯ್ಯುವಂತಾಗಿದೆ. ಸಾಲ ಹೆಚ್ಚು ಮಾಡಿ ಬಜೆಟ್ ಮಂಡಿಸಿದ್ದು, ಆರ್ಥಿಕ ದಿವಾಳಿತನಕ್ಕೆ ದಾರಿಯಾಗಿದೆ'' ಎಂದು ಟೀಕಿಸಿದರು. ''ಪರಿಸರಕ್ಕೆ ಸಂಬಂಧಿಸಿದಂತೆ ವಿಚಾರ ಬಜೆಟ್‍ನಲ್ಲಿ ಉಲ್ಲೇಖವಾಗಿಲ್ಲ. ಕಲುಷಿತ ನೀರು ಕಾಲುವೆಗಳಿಗೆ ಹರಿಯುತ್ತಿರುವುದನ್ನು ತಡೆಯಬೇಕು. ತುಂಗಾ ನದಿ ಬಳಿ ಒತ್ತುವರಿ ತಡೆಯಬೇಕು'' ಎಂದು ಒತ್ತಾಯಿಸಿದರು.
ಆಡಳಿತ ಪಕ್ಷದ ಶಾಸಕ ನಾರಾಯಣ ಸ್ವಾಮಿ ಮಾತನಾಡಿ, ''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟ್ನ್ನು ಸ್ವಾಗತಿಸಿ, ಎಲ್ಲಾ ವರ್ಗಗಳ ಏಳಿಗೆಗಾಗಿ ಪೂರಕವಾದ ಬಜೆಟ್ ಇದಾಗಿದೆ. ಇಂತಹ ಉತ್ತಮ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗೆ ಅಭಿನಂದಿಸುವುದು'' ತಿಳಿಸಿದರು.
''ಬರಪೀಡಿತ ಕೋಲಾರ ಜಿಲ್ಲೆಗೆ ಕೆ.ಸಿ.ವ್ಯಾಲಿ ಯೋಜನೆ ಅನುಷ್ಠಾನ ಮಾಡುವ ಮೂಲಕ ಕೆರೆಗಳನ್ನು ತುಂಬಿಸಿ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದ ರೈತರಿಗೆ ಅನುಕೂಲವಾಗಿದೆ. ಚುನಾವಣಾ ಪೂರ್ವ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲು ಬಜೆಟ್‍ನಲ್ಲಿ ಹಣ ಒದಗಿಸಿದ್ದಾರೆ. ಬಜೆಟ್‍ನಲ್ಲಿ ಜನಪರ ಹಾಗೂ ರೈತರ ಪರ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ'' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸರ್ಕಾರಿ ನೌಕರರ ವೇತನ ಪರಿಷ್ಕರಣೆ ಕುರಿತ ಏಳನೇ ವೇತನ ಆಯೋಗದ ಬಗ್ಗೆ ಬಜೆಟ್‍ನಲ್ಲಿ ಯಾವುದೇ ಪ್ರಸ್ತಾಪವಿಲ್ಲ : ಜೆಡಿಎಸ್ ಶಾಸಕ ಎಂ ಟಿ ಕೃಷ್ಣಪ್ಪ