ಕರ್ನಾಟಕ

karnataka

ETV Bharat / state

ವೈಯಕ್ತಿಕ ಟೀಕೆಯತ್ತ ತಿರುಗಿದ ಬಜೆಟ್ ಮೇಲಿನ ಚರ್ಚೆ: ಪರಿಷತ್​ನಲ್ಲಿ ಹರಿಪ್ರಸಾದ್, ಸಿಸಿ ಪಾಟೀಲ್ ಜಟಾಪಟಿ

ವಿಧಾನ ಪರಿಷತ್​​ನಲ್ಲಿ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್​ ಸರ್ಕಾರ ಮಂಡಿಸಿರುವ ಬಜೆಟ್​ ಜನ ವಿರೋಧಿ ಬಜೆಟ್​ ಎಂದು ಟೀಕಿಸಿದ್ದಾರೆ.

debate-on-budget-in-legislative-council
ವೈಯಕ್ತಿಕ ಟೀಕೆಯತ್ತ ತಿರುಗಿದ ಬಜೆಟ್ ಮೇಲಿನ ಚರ್ಚೆ: ಪರಿಷತ್​ನಲ್ಲಿ ಹರಿಪ್ರಸಾದ್, ಸಿಸಿ ಪಾಟೀಲ್ ಜಟಾಪಟಿ

By

Published : Feb 22, 2023, 4:15 PM IST

Updated : Feb 22, 2023, 4:32 PM IST

ಪರಿಷತ್​ನಲ್ಲಿ ಹರಿಪ್ರಸಾದ್, ಸಿಸಿ ಪಾಟೀಲ್ ಜಟಾಪಟಿ

ಬೆಂಗಳೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಮಂಡಿಸಿರುವ ಬಜೆಟ್ ರೈತ ವಿರೋಧಿ, ಕಾರ್ಮಿಕ ವಿರೋಧಿ, ಸಾಮಾಜಿಕ ನ್ಯಾಯದ ವಿರೋಧಿಯಾಗಿದೆ, ಜನವಿರೋಧಿ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಟೀಕಿಸಿದರು. ಈ ವೇಳೆ ಹರಿಪ್ರಸಾದ್ ಮತ್ತು ಸಚಿವ ಸಿಸಿ ಪಾಟೀಲ್ ನಡುವೆ ಹತ್ತು ಲಕ್ಷ ಲಂಚದ ವಿಷಯ ಪ್ರಸ್ತಾಪವಾಗಿ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ವಿಧಾನ ಪರಿಷತ್​ನಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ರೈತರ ಪರ ಎನ್ನುತ್ತಾರೆ, ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ವಿಧಾನಸೌಧದ ಮುಂದೆ ಪ್ರಮಾಣ ವಚನ ಸ್ವೀಕರಿಸಿದ ವಾರದಲ್ಲೇ ರೈತರ ಮೇಲೆ ಗೋಲಿಬಾರ್ ಮಾಡಿಸಿದರು, ಹಾವೇರಿ ಗೋಲಿಬಾರ್​ನಲ್ಲಿ ಸತ್ತವರು ರೈತರಲ್ಲ ಗೂಂಡಾಗಳು ಎಂದರು, ಇವರಿಂದ ಕಾಂಗ್ರೆಸ್ ರೈತರ ಕಾಳಜಿ ಪಾಠ ಕಲಿಯಬೇಕಿಲ್ಲ ಎಂದು ಕಿಡಿಕಾರಿದರು.

ಈ ಸರ್ಕಾರ ಬಡವರ ಪರ ಇಲ್ಲ, ಒಂದು ಕಡೆ ಬೆಲೆ ಏರಿಕೆ ಇದೆ. ಬೆನ್ನು ಮುರಿಯುವ ಬೆಲೆ ಏರಿಕೆ ನಿಯಂತ್ರಣವನ್ನು ನೂರು ದಿನದಲ್ಲಿ ಮಾಡುವುದಾಗಿ ವಿಶ್ವಗುರು ಹೇಳಿದ್ದರು. ಆದರೆ, ಎಲ್ಲ ಬೆಲೆ ಹೆಚ್ಚಳವಾದರೂ ಏನೂ ಮಾಡಿಲ್ಲ, ರಾಜ್ಯದ ಬಜೆಟ್​ನಲ್ಲಿಯೂ ಏನೂ ಹೇಳಿಲ್ಲ. ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಇಂದಿರಾ ಕ್ಯಾಂಟಿನ್ ಮಾಡಿದ್ದರು, ಅದನ್ನು ನಿಲ್ಲಿಸಿದ್ದಾರೆ ಬಡವರು ತಿನ್ನುವ ಕ್ಯಾಂಟಿನ್ ಬಂದ್​ ಮಾಡಿದ್ದಾರೆ. ತಮಿಳುನಾಡಿನಲ್ಲಿ ಸರ್ಕಾರ ಬದಲಾದರೂ ಅಮ್ಮಾ ಕ್ಯಾಂಟೀನ್ ನಿಲ್ಲಿಸಲಿಲ್ಲ, ಆದರೆ ಇಲ್ಲಿ ಇವರಿಗೆ ಕಾಳಜಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಧ್ಯಪ್ರವೇಶಿಸಿದ ಸಚಿವ ಸಿಸಿ ಪಾಟೀಲ್​:ಈ ವೇಳೆ, ಮಧ್ಯಪ್ರವೇಶ ಮಾಡಿದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಹರಿಪ್ರಸಾದ್ ಅವರಿಗೆ ತಪ್ಪು ಮಾಹಿತಿ ನೀಡುವ ಹವ್ಯಾಸವಿದೆ ಅದಕ್ಕಾಗಿಯೇ ನಮ್ಮ ಸರ್ಕಾರ ಏನೂ ಮಾಡಿಲ್ಲ ಎನ್ನುತ್ತಿದ್ದಾರೆ ಎಂದು ಟಾಂಗ್ ನೀಡಿದರು. ಇದಕ್ಕೆ ಕೆರಳಿದ ಹರಿಪ್ರಸಾದ್, ಎಕ್ಸಿಕ್ಯುಟಿವ್ ಇಂಜಿನಿಯರ್ ಒಬ್ಬರು ಹತ್ತು ಲಕ್ಷ ಹಣವನ್ನು ವಿಧಾನಸೌಧಕ್ಕೆ ತಂದು ಸಚಿವರಿಗೆ ಕೊಡಲು ಬಂದಿದ್ದರು. ಇಂತವರು ನಮಗೆ ತಪ್ಪು ಸರಿ ಮಾಹಿತಿ ನೀಡುವುದು ಬೇಕಿಲ್ಲ ಎಂದು ತಿರುಗೇಟು ನೀಡಿದರು.

ನಂತರ ಅಡಕೆ ಬೆಳೆಯಬೇಡಿ ಎಂದು ಗೃಹ ಸಚಿವರು ಹೇಳುತ್ತಾರೆ. ಇವರದ್ದು ಹೇಗೆ ರೈತಪರ ಸರ್ಕಾರವಾಗಲಿದೆ ಎನ್ನುತ್ತಿದ್ದಂತೆ ಆರಗ ಜ್ಞಾನೇಂದ್ರ ಸ್ಪಷ್ಟೀಕರಣ ನೀಡಿದರು. ವಿಧಾನಸಭೆಯಲ್ಲಿ ಮಾತನಾಡುವಾಗ ವಿಶ್ವಬ್ಯಾಂಕ್​ನಿಂದ ಜಲಾಶಯ ನಿರ್ಮಾಣಕ್ಕೆ ಸಾಲ ತರುವಾಗ ಎಣ್ಣೆಕಾಳು ಇತ್ಯಾದಿ ಬೆಳೆ ಬೆಳೆಯುತ್ತೇವೆ ಎಂದಿದ್ದೇವೆ, ಆದರೆ ಅಡಕೆ ವ್ಯಾಪಕವಾಗಿದೆ, ಪ್ರತಿ ವರ್ಷ 2 ಕೋಟಿ ಸಸಿಗಳ ವಿತರಣೆ ಆಗುತ್ತಿದೆ ಹೀಗಾದಲ್ಲಿ ಮುಂದೆ ಬೆಳೆಯ ಬೆಲೆ ಕುಸಿತ ಸಾಧ್ಯತೆ ಇದೆ, ಕರಾವಳಿ, ಮಲೆನಾಡಿನಲ್ಲಿದ್ದ ಅಡಕೆ ಕೃಷಿ ಈಗ ಬಯಲು ಸೀಮೆಯಲ್ಲಿಯೂ ವ್ಯಾಪಕವಾಗಿದೆ ಹಾಗಾಗಿ ಇನ್ನು ಮುಂದೆ ಹೊಸದಾಗಿ ಅಡಿಕೆ ಬೆಳೆಯಲು ಎನ್ಆರ್​ಇಜಿ ಅಡಿ ಪ್ರೋತ್ಸಾಹ ಬೇಡ ಎಂದಿದ್ದೆ ಅಷ್ಟೆ. ಅಡಕೆ ಬೆಳೆಯನ್ನೇ ಬೆಳೆಯಬೇಡಿ ಎಂದಿರಲಿಲ್ಲ ಎಂದರು.

ತೂಕವಿರದ ವಿರೋಧ ಪಕ್ಷ : ಇದಕ್ಕೆ ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್ ನಾನೂ ಅದನ್ನೇ ಹೇಳಿದ್ದು ಎನ್ನುತ್ತಿದ್ದಂತೆ ಸಿಸಿ ಪಾಟೀಲ್ ಮತ್ತೆ ಮಧ್ಯಪ್ರವೇಶ ಮಾಡಿದರು. ಆಗ ನೀವು ಎನ್ಆರ್​ಇಜಿ ಉಲ್ಲೇಖಿಸಿರಲಿಲ್ಲ ಕಡತ ತೆಗೆಸಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪರ ಮಾತಿಗೆ ಮುಂದಾದರು. ಇದಕ್ಕೆ ಕೆಂಡವಾದ ಹರಿಪ್ರಸಾದ್, ನೀವು ಇಲ್ಲಿ ಮಾತನಾಡಬೇಡಿ, ಗೃಹ ಸಚಿವರು ಸಮರ್ಥರಿದ್ದಾರೆ, ನೀನು ಹೋಗಿ 10 ಲಕ್ಷ ತಗೊ ಎಂದರು, ಇದಕ್ಕೆ ಟಾಂಗ್ ನೀಡಿದ ಸಿಸಿ ಪಾಟೀಲ್ ನೀನೇ ತೆಗೆದುಕೊಳ್ಳು ಹೋಗು, ಪ್ರತಿಪಕ್ಷ ನಾಯಕನ ಮಾತು ತೂಕದಿಂದ ಕೂಡಿರಬೇಕು, ತೂಕವಿರದ ವಿರೋಧ ಪಕ್ಷ ಇರಿಸಿಕೊಂಡು ಹೇಗೆ ಸದನ ನಡೆಸುವುದು ಎಂದರು. ಇದಕ್ಕೂ ಟಾಂಗ್ ನೀಡಿದ ಹರಿಪ್ರಸಾದ್ ನಮಗೆ ತೂಕವಿಲ್ಲ, ಹತ್ತು ಲಕ್ಷಕ್ಕೆ ತೂಕವಿದೆ ಎಂದರು.

ನಮ್ಮದು ಚುಚ್ಚುವ ಸಂಸ್ಕೃತಿ ಅಲ್ಲ:ಈ ವೇಳೆ ಮಧ್ಯಪ್ರವೇಶ ಮಾಡಿದ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷ ನಾಯಕರು ಸರ್ಕಾರವನ್ನು‌ ಚುಚ್ಚಿ ಮಾತನಾಡುವುದು, ಟೀಕಿಸುವುದು ಸರಿ. ಆದರೆ, ಈ ರೀತಿ ವೈಯಕ್ತಿಕವಾಗಿ ಹೋಗಬಾರದು ಎಂದರು. ಇದಕ್ಕೆ ತಿರುಗೇಟು ನೀಡಿದ ಹರಿಪ್ರಸಾದ್, ನಮ್ಮದು ಚುಚ್ಚುವ ಸಂಸ್ಕೃತಿ ಅಲ್ಲ, ಅದು ನಿಮ್ಮ ಸಂಸ್ಕೃತಿ, ಗೃಹ ಸಚಿವರ ಊರಿಗೆ ಬಂದಿದ್ದ ಸಂಸದರೊಬ್ಬರು ನಿಮ್ಮ ಮನೆಯ ತಲವಾರ್​ಗಳ ಚೂಪಾಗಿಸಿಕೊಳ್ಳಿ ಎಂದಿದ್ದರು, ನಮ್ಮದು ಅಂತಹ ಸಂಸ್ಕೃತಿಯಲ್ಲ ಎಂದು ನಡ್ಡಾ ಹೆಸರು ಹೇಳದೆ ಟೀಕಿಸಿದರು.

ಇದು ಜನವಿರೋಧಿ ಬಜೆಟ್:ನಂತರ ಬಜೆಟ್ ಮೇಲಿನ ಚರ್ಚೆಯತ್ತ ವಿಷಯ ತಿರುಗಿಸಿದ ಹರಿಪ್ರಸಾದ್, ಈ ಬಜೆಟ್​ನಲ್ಲಿ ಉದ್ಯೋಗಕ್ಕೆ ಏನೂ ಮಾಡಿಲ್ಲ, ಇವಿ ಸಂಸ್ಥೆ ಹೊರ ರಾಜ್ಯಕ್ಕೆ ಹೋಗಿದೆ. ಉತ್ಪಾದನಾ ವಲಯದಲ್ಲಿ ನಾವು ನಂಬರ್ ಒನ್ ಎನ್ನುತ್ತಾರೆ, ಆದರೆ, ಅಂಕಿ ಅಂಶಗಳನ್ನು ಕೊಡಬೇಕು ಅದನ್ನು ಬಿಟ್ಟು ಬರೀ ಹೇಳಿದರೆ ಸಾಲದು. ರೈತ, ಕಾರ್ಮಿಕ, ಸಾಮಾಜಿಕ ನ್ಯಾಯದ ವಿರೋಧಿ ಬಜೆಟ್ ಇದಾಗಿದೆ, ಮಹಿಳಾ ಸುರಕ್ಷತೆ ಯೋಚನೆ ಇಲ್ಲ, ಬೆಲೆ ಎರಿಕೆಗೆ ಪರಿಹಾರ ಇಲ್ಲ, ಇದು ಜನವಿರೋಧಿ ಬಜೆಟ್ ಎಂದು ಹರಿಪ್ರಸಾದ್​ ಟೀಕಿಸಿದರು.

ಇದನ್ನೂ ಓದಿ:'ಬಿಎಸ್​ವೈ ಮುಕ್ತ ಬಿಜೆಪಿ' ಒಂದು ಪೂರ್ವ ನಿಯೋಜಿತ ಅಭಿಯಾನ: ಕಾಂಗ್ರೆಸ್

Last Updated : Feb 22, 2023, 4:32 PM IST

ABOUT THE AUTHOR

...view details