ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಗೂ ಭ್ರಷ್ಟಾಚಾರದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಿದ್ದ ವೇಳೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ನಡುವೆ ಮಾತಿನ ವಾಗ್ವಾದ ನಡೆದ ಘಟನೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ನಿಯಮ-69ರಡಿ ಮಾತನಾಡಿದ ಸಿದ್ದರಾಮಯ್ಯ, ಪೊಲೀಸ್ ಇಲಾಖೆಯಲ್ಲಿ ಹೋಟೆಲ್ನಲ್ಲಿ ತಿಂಡಿಗಳ ದರವಿದ್ದಂತೆ ಅಧಿಕಾರಿಗಳ ವರ್ಗಾವಣೆಗೆ ದರ ನಿಗದಿಪಡಿಸಲಾಗಿದೆ ಎಂಬ ಮಾಹಿತಿ ಮಾಧ್ಯಮವೊಂದರಲ್ಲಿ ವರದಿಯಾಗಿದೆ. ಇಂತಹವರಿಂದ ಕಾನೂನು ಕಾಪಾಡುವ ನಿರೀಕ್ಷೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಆಗ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ವರ್ಗಾವಣೆ ಮಾಡಲು ಹಿಂದೆ ಏಜೆಂಟ್ ಇಟ್ಟುಕೊಂಡಿದ್ದರು. ಅವರನ್ನು ನಾನು ಹತ್ತಿರ ಸೇರಿಸಲಿಲ್ಲ. ಪೊಲೀಸ್ ಇಲಾಖೆಯಲ್ಲಿ ಯಾವಾಗಿನಿಂದ ಭ್ರಷ್ಟಾಚಾರ ಶುರುವಾಗಿದೆ ಹೇಳಿ ಎಂದರು. ಆಗ ಸಿದ್ದರಾಮಯ್ಯ ಅದಕ್ಕಾಗಿಯೇ ಜನರು ಬದಲಿಸಿದ್ದಾರೆ. ನೀವು ಅಧಿಕಾರಕ್ಕೆ ಬಂದು ಏನು ಬದಲಾವಣೆ ತಂದಿದ್ದೀರಿ ಹೇಳಿ?. ಕೊಟ್ಟ ಕುದುರೆ ಏರದವನು ಶೂರನೂ ಅಲ್ಲ, ವೀರನೂ ಅಲ್ಲ ಎಂದು ಅಲ್ಲ ಪ್ರಭುವಿನ ವಚನವನ್ನು ಉಲ್ಲೇಖಿಸಿದರು. ನಿಮ್ಮಲ್ಲಿ ದೂರದೃಷ್ಟಿ ಹೋಗಿದೆ ಎಂದು ಟೀಕಿಸಿದರು.
ಗೃಹ ಸಚಿವ ಅರಗ ಜ್ಞಾನೇಂದ್ರ ಮಧ್ಯೆ ಪ್ರವೇಶಿಸಿ, ಹಳೆ ಕುದುರೆ ಹೊಸ ಸವಾರ ಕುದುರೆ ಎಳೆದುಕೊಂಡು ಹೋಗುತ್ತದೆ. ಹೆಂಡದಂಗಡಿಗೂ ಹೋಗುತ್ತದೆ, ಮತ್ತೆಲ್ಲಿಗೋ ಹೋಗುತ್ತದೆ. ನಾವು ನಿಭಾಯಿಸುತ್ತೇವೆ. ಏಜೆಂಟರನ್ನು ದೂರ ಇಟ್ಟಿದ್ದೇವೆ. ವರ್ಗಾವಣೆ ಭ್ರಷ್ಟಾಚಾರದ ಲೇಖನ ಪ್ರಕಟಿಸಿದ ಪತ್ರಿಕೆಯಿಂದ ಮಾಹಿತಿ ಕೇಳಿದ್ದೇವೆ. ಅವರೆಲ್ಲ ನನ್ನ ಕಾಲದಲ್ಲಿ ನೇಮಕವಾದವರಲ್ಲ, ನಿಮ್ಮ ಕಾಲದಲ್ಲಿ ಎಷ್ಟರ ಮಟ್ಟಿಗೆ ಕಾನೂನು ಸುವ್ಯವಸ್ಥೆ ಇತ್ತು ಎಂಬುದನ್ನು ಹೇಳುತ್ತೇವೆ ಎಂದು ಸವಾಲು ಹಾಕಿದರು.
ಜಾತಿ, ಧರ್ಮ ರಹಿತವಾಗಿ ಇರಬೇಕಾದ ಪೊಲೀಸ್ ಇಲಾಖೆ ಇತ್ತೀಚೆಗೆ ದಿಕ್ಕು ತಪ್ಪುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಬಡ್ಡಿಗೆ ಹಣ ತಂದು ವರ್ಗಾವಣೆ ಮಾಡಿಸಿಕೊಂಡಿದ್ದಾರಂತೆ ಎಂದು ಸಿದ್ದರಾಮಯ್ಯ ಸದನದ ಗಮನಕ್ಕೆ ತಂದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಡೆದ ಅತ್ಯಾಚಾರ ಪ್ರಕರಣ ಸಂಬಂಧ ಆ ಸಂದರ್ಭದಲ್ಲಿ ಗೃಹ ಸಚಿವರ ಹೇಳಿಕೆ ಉಲ್ಲೇಖಿಸಿದ ಸಿದ್ದರಾಮಯ್ಯ, ಮಹಾತ್ಮ ಗಾಂಧೀಜಿ ಹೆಣ್ಣು ಮಕ್ಕಳು ಮಧ್ಯರಾತ್ರಿಯೂ ನಿರ್ಭೀತಿಯಿಂದ ಓಡಾಡಬೇಕು ಎಂದು ಹೇಳಿದ್ದರು ಎಂದಾಗ, ಆರಗ ಜ್ಞಾನೇಂದ್ರ ಅವರು ಗಾಂಧೀಜಿ ರಾಮರಾಜ್ಯವಾಗಬೇಕು ಎಂದಿದ್ದರು. ನಿಮ್ಮ ಕಾಲದಲ್ಲೂ ಆಗಿಲ್ಲ. ಮೃಗೀಯ ಮನಸ್ಸುಗಳಿರುತ್ತವೆ. ಹೆಣ್ಣು ಮಕ್ಕಳು ರಾತ್ರಿ 8, 9 ಗಂಟೆಯಲ್ಲಿ ಕಾಡಿಗೆ ಹೋಗಬಾರದು ಎಂದಿದ್ದೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ ಎಂದು ಪ್ರತಿಕ್ರಿಯೆ ನೀಡಿದರು.