ಬೆಂಗಳೂರು: ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡುತ್ತಿದ್ದ ವೇಳೆ ಆರ್ಎಸ್ಎಸ್ ಕುರಿತು ವಿಧಾನಸಭೆಯಲ್ಲಿ ಇಂದು ಸ್ವಾರಸ್ಯಕರ ಚರ್ಚೆ ನಡೆಯಿತು. ನಿಯಮ 69 ರಡಿ ಸಿದ್ದರಾಮಯ್ಯ ಮಾತನಾಡುತ್ತಿದ್ದ ವೇಳೆ, ಸಚಿವ ಅಶೋಕ್ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ ಇದೆ, ರಾಜಕೀಯ ಬೇರೆ, ಹೀ ಈಸ್ ಎ ಗುಡ್ ಹ್ಯೂಮನ್ ಬೀಯಿಂಗ್ ಎಂದಿದ್ದಾರೆ. ಈ ವೇಳೆ ಅಶೋಕ್ ಹಾಗೂ ಸಭಾಪತಿಗಳು ಒಟ್ಟಾಗಿ, ನೀವ್ಯಾಕೆ ಆರ್ಎಸ್ಎಸ್ ಬಗ್ಗೆ ಅಷ್ಟು ಬೇಸರ ಮಾಡಿಕೊಳ್ಳುತ್ತೀರಿ ಎಂದರು. ಆಗ, ಸಿದ್ದರಾಮಯ್ಯ, ಬೇಸರನೇ ಮಾಡ್ಕೊಂಡಿಲ್ಲಾ, ಆರ್ ಎಸ್ ಎಸ್ ಅನ್ನೋದು ರಾಷ್ಟ್ರೀಯ ಸೇವಾ ಸಂಘ, ಅದು ಹೇಳೋದು ತಪ್ಪಾ? ಎಂದಾಗ ಅದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿದ್ದಿದರು. ಹಾಗೆ ಅದು ನಮ್ಮ ಆರ್ ಎಸ್ ಎಸ್ ಎಂದರು.
ನೀವು ಪೀಠದಲ್ಲಿ ಕುಳಿತು ನಮ್ಮ ಆರ್ಎಸ್ಎಸ್ ಅಂತಾ ಹೇಳ್ತಿದ್ದೀರಲ್ಲಾ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಈ ವೇಳೆ ಪ್ರಶ್ನೆ ಮಾಡಿದರು. ಇನ್ನೇನು ಮತ್ತೆ? ಅದು ನಮ್ಮ ಅರ್ಎಸ್ಎಸ್ಸೆ, ಇನ್ನೂ ಒಂದು ಹೇಳ್ತಿನಿ ಕೇಳಿ, ಒಂದಲ್ಲ ಒಂದು ದಿನ ನೀವೂ ಕೂಡಾ ನಮ್ಮ ಆರ್ಎಸ್ಎಸ್ ಎಂದು ಹೇಳಬೇಕಾಗುತ್ತದೆ ಎಂದು ನಗುತ್ತಲೇ ಸ್ಪೀಕರ್ ಉತ್ತರಿಸಿದರು. ಆ ವೇಳೆ ಕಾಂಗ್ರೆಸ್ನ ಸದಸ್ಯರು ಎದ್ದು ನಿಂತು ಸಾಧ್ಯವೇ ಇಲ್ಲ ಎಂದು ಧ್ವನಿ ಏರಿಸಿದರು. ಸಿದ್ದರಾಮಯ್ಯ ಮಾತನಾಡಿ, ಆರ್ಎಸ್ಎಸ್ ನಿಂದ ಈ ದೇಶದಲ್ಲಿ ಮನುವಾದ ಬರುತ್ತದೆ. ಅದಕ್ಕೆ ವಿರೋಧ ಮಾಡುತ್ತೇವೆ ಎಂದು ಹೇಳಿದರು. ಈ ವೇಳೆ ಸಚಿವ ಅಶೋಕ್ ಮಾತನಾಡಿ, ಅಧ್ಯಕ್ಷರೇ ನೀವು ಹೇಳಿದ್ದಕ್ಕೆ ನನ್ನ ಸಹಮತ ಇದೆ. ಈಗ ಸರ್ವ ವ್ಯಾಪಿ ಆಗಿಹೋಗಿದೆ, ಈ ದೇಶದ ರಾಷ್ಟ್ರಪತಿ ಆರ್ಎಸ್ಎಸ್, ಪ್ರಧಾನಿ, ಉಪ ರಾಷ್ಟ್ರಪತಿ, ಮುಖ್ಯಮಂತ್ರಿಗಳು ಆರ್ಎಸ್ಎಸ್ ಎಂದರು.