ಬೆಂಗಳೂರು: ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಕುರಿತು ಡಿ. 14 ಮತ್ತು 15ರಂದು ಎರಡು ದಿನ ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಚರ್ಚೆ ನಡೆಯಲಿದೆ ಎಂದು ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನ. 25 ಮತ್ತು 26ರಂದು ಗುಜರಾತ್ನ ಕೆವಾಡಿಯಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 80ನೇ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮ್ಮೇಳನದಲ್ಲಿ ಪ್ರಸ್ತಾಪಿಸಿದ ಒಂದು ರಾಷ್ಟ್ರ-ಒಂದು ಚುನಾವಣೆ ಕುರಿತ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಭಾರತದಲ್ಲೇ ಪ್ರಪ್ರಥಮವಾಗಿ ಈ ವಿಷಯವನ್ನು ಸದನದಲ್ಲಿ ಸಮಗ್ರವಾಗಿ ಚರ್ಚಿಸಿ ಚಿಂತನ-ಮಂಥನ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇದನ್ನೂ ಓದಿ: ಒನ್ ನೇಷನ್, ಒನ್ ಎಲೆಕ್ಷನ್ಗೆ ಸಮಿತಿ ರಚನೆ... ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧಾರ!
ಡಿ. 7ರಿಂದ ಪ್ರಾರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ಪ್ರಶ್ನೋತ್ತರ ಅವಧಿ ಒಳಗೊಂಡಂತೆ ಎಲ್ಲಾ ಕಾರ್ಯಕಲಾಪಗಳು ಇರುತ್ತವೆ ಎಂದು ಸ್ವಷ್ಟಪಡಿಸಿದ ಅವರು, ಸದನದಲ್ಲಿ 10 ವಿಧೇಯಕಗಳು ಮಂಡನೆಗೆ ಸಿದ್ಧವಿದೆ. ಕೊರೊನಾ ಹಿನ್ನೆಲೆ ಈ ಹಿಂದೆ ಕೈಗೊಂಡ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ. ಆದರೆ ಕಲಾಪದಲ್ಲಿ ಪಾಲ್ಗೊಳ್ಳುವ ಸದಸ್ಯರು, ಕಲಾಪದ ಚಟುವಟಿಕೆಗಳಿಗೆ ನೆರವಾಗುವ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಕಲಾಪದ ವರದಿಯ ವೀಕ್ಷಣೆಗೆ ಆಗಮಿಸುವ ಮಾಧ್ಯಮದವರಿಗೆ ಮತ್ತೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ ಮಾಡಿಸಿಕೊಂಡು ಬರಬೇಕೇ? ಅಥವಾ ಬೇಡವೇ? ಎಂಬ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಯೋಚಿಸಲಾಗಿದೆ ಎಂದರು.
ಕೆವಾಡಿಯಾಕ್ಕೆ ಒಮ್ಮೆ ಭೇಟಿ ಕೊಡಿ:
ಕೊರೊನಾ ಉಪಟಳ ಮುಗಿದೊಡನೆಯೇ ಎಲ್ಲರೂ ಕೆವಾಡಿಯಾಕ್ಕೆ ಒಮ್ಮೆ ಭೇಟಿ ಕೊಡಿ. ನರ್ಮದಾ ನದಿಯ ತಟದಲ್ಲಿ ನಿರ್ಮಿಸಿರುವ ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಲೋಹದ ಏಕತಾ ಮೂರ್ತಿ, ಮಕ್ಕಳ ಪೋಷಕಾಂಶ ಉದ್ಯಾನ, ಆರೋಗ್ಯವನ, ಹೂಬನ, ಚಿಟ್ಟೆ ಉದ್ಯಾನ ಎಲ್ಲವನ್ನೂ ವರ್ಣಿಸಲು ಅಸಾಧ್ಯ. ಇದನ್ನು ಒಮ್ಮೆ ಕಂಡು ಕಣ್ತುಂಬಿಕೊಂಡರೆ ಮಾತ್ರ ಅರ್ಥವಾಗುತ್ತದೆ ಎಂದು ಅವರು ಬಣ್ಣಿಸಿದರು.