ಕರ್ನಾಟಕ

karnataka

ETV Bharat / state

ರಸ್ತೆ ಗುಂಡಿಯಿಂದ ಸರಣಿ ಸಾವು: ನ. 19ಕ್ಕೆ ಎಎಪಿಯಿಂದ ಬೃಹತ್‌ ಪ್ರತಿಭಟನೆ, ವಿಧಾನಸೌಧಕ್ಕೆ ಮುತ್ತಿಗೆ - ನಗರ ಎಎಪಿ ಸಂಘಟನಾ ಕಾರ್ಯದರ್ಶಿ ಸುರೇಶ್‌ ರಾಥೋಡ್‌

ವಿಶೇಷವಾಗಿ ವಾಹನ ಸವಾರರು ಹಾಗೂ ಯುವಜನತೆ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು. ಉತ್ತಮ ರಸ್ತೆ ಪಡೆಯುವುದು ಎಲ್ಲರ ಹಕ್ಕಾಗಿದ್ದು, ಇದಕ್ಕಾಗಿ ಜನರು ಒಂದುಗೂಡಬೇಕು ಎಂದು ಆಮ್​ ಆದ್ಮಿ ಪಕ್ಷ ನಿರ್ಧರಿಸಿದೆ.

Massive protest by AAP on November 19
ಎಎಪಿಯಿಂದ ಬೃಹತ್‌ ಪ್ರತಿಭಟನೆ, ವಿಧಾನಸೌಧಕ್ಕೆ ಮುತ್ತಿಗೆ

By

Published : Nov 17, 2022, 6:57 PM IST

ಬೆಂಗಳೂರು:ರಸ್ತೆ ಗುಂಡಿಗಳಿಗೆ ವಾಹನ ಸವಾರರು ಬಲಿಯಾಗುತ್ತಿರುವ ಪ್ರಕರಣಗಳು ಏರಿಕೆಯಾಗುತ್ತಿದ್ದರೂ ಈ ಕುರಿತು ನಿರ್ಲಕ್ಷ್ಯ ವಹಿಸಿರುವ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶನಿವಾರದಂದು ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಕುರಿತು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಎಎಪಿ ಬೆಂಗಳೂರು ನಗರಾಧ್ಯಕ್ಷ ಮೋಹನ್‌ ದಾಸರಿ, ಇತ್ತೀಚಿನ ದಿನಗಳಲ್ಲಿ ರಸ್ತೆ ಗುಂಡಿಗಳಿಂದಾಗಿ ಅಪಘಾತಗಳು, ಗಾಯಗಳು, ಸಾವುಗಳು ಸಾಮಾನ್ಯವಾಗಿವೆ. ಸರ್ಕಾರದ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರದಿಂದಾಗಿ ಅಮಾಯಕ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆಗುಂಡಿಗಳಿಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುವ ತಾಕತ್ತು ಈ ಸರ್ಕಾರಕ್ಕೆ ಇಲ್ಲ. ಜನವಿರೋಧಿಯಾಗಿರುವ ಈ ಲಜ್ಜೆಗೇಡಿ ಸರ್ಕಾರದ ವಿರುದ್ಧ ಆಮ್‌ ಆದ್ಮಿ ಪಾರ್ಟಿಯು ನವೆಂಬರ್‌ 19ರ ಶನಿವಾರದಂದು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ನಡೆಸಿ, ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದೆ. ಈ ಮೂಲಕ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಲಿದೆ ಎಂದು ಹೇಳಿದರು.

ರಸ್ತೆಗುಂಡಿಯಿಂದ ಸಾವುಗಳು: ನವೆಂಬರ್‌ 19ಕ್ಕೆ ಎಎಪಿಯಿಂದ ಬೃಹತ್‌ ಪ್ರತಿಭಟನೆ, ವಿಧಾನಸೌಧ ಮುತ್ತಿಗೆ....

ರಸ್ತೆ ಗುಂಡಿಗೆ ಬಲಿಯಾದವರ ಕುಟುಂಬದವರ ಅನೇಕ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ, ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಲಿದ್ದಾರೆ. ಸಾಮಾಜಿಕ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಹಾಗೂ ನಾಗರಿಕ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ನಮ್ಮ ಈ ಜನಪರ ಹೋರಾಟಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡುತ್ತಿದ್ದೇವೆ. ಬೆಂಗಳೂರಿನ ಸಮಸ್ತ ಜನತೆ, ಅದರಲ್ಲೂ ವಿಶೇಷವಾಗಿ ವಾಹನ ಸವಾರರು ಹಾಗೂ ಯುವಜನತೆ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು. ಉತ್ತಮ ರಸ್ತೆ ಪಡೆಯುವುದು ಎಲ್ಲರ ಹಕ್ಕಾಗಿದ್ದು, ಇದಕ್ಕಾಗಿ ಜನರು ಒಂದುಗೂಡಬೇಕು ಎಂದು ಮೋಹನ್‌ ದಾಸರಿ ಮನವಿ ಮಾಡಿದರು.

ಬಿಜೆಪಿ ಸರ್ಕಾರ ಮೀನಾಮೇಷ: ಬೆಂಗಳೂರು ನಗರ ಎಎಪಿ ಸಂಘಟನಾ ಕಾರ್ಯದರ್ಶಿ ಸುರೇಶ್‌ ರಾಥೋಡ್‌ ಮಾತನಾಡಿ, ರಸ್ತೆ ಗುಂಡಿಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚುವುದು ಹಾಗಿರಲಿ, ರಸ್ತೆಗುಂಡಿಗಳಿಂದ ಕೈಕಾಲು ಮುರಿದುಕೊಂಡವರಿಗೆ ಹಾಗೂ ಬಲಿಯಾದವರ ಕುಟುಂಬದವರಿಗೆ ಪರಿಹಾರ ನೀಡಲೂ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ಮುಖ್ಯಮಂತ್ರಿಯವರು, ಸಚಿವರು, ಶಾಸಕರು, ಅಧಿಕಾರಿಗಳು ಯಾರೂ ಕೂಡ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರುತ್ತಿಲ್ಲ. ಹೈಕೋರ್ಟ್‌ ಪದೇಪದೇ ಛೀಮಾರಿ ಹಾಕಿದರೂ ತಲೆಕೆಡಿಸಿಕೊಳ್ಳದಷ್ಟು ಈ ಬಿಜೆಪಿ ಸರ್ಕಾರ ಹಾಗೂ ಬಿಬಿಎಂಪಿ ಭಂಡತನ ಮೆರೆಯುತ್ತಿದೆ. ಪದೇಪದೇ ಡೆಡ್‌ಲೈನ್‌ ಮುಂದಕ್ಕೆ ಹಾಕುವ ಮೂಲಕ ಬೆಂಗಳೂರಿಗರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:ರಾಜಕೀಯ ಬಿಡ್ತೀನಿ ಹೊರತು, ಮಂಡ್ಯ ಬಿಡಲ್ಲ: ಸಂಸದೆ ಸುಮಲತಾ ಅಂಬರೀಶ್​

ABOUT THE AUTHOR

...view details