ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಜಗತ್ತಿನಾದ್ಯಂತ ಯಾರು ಊಹಿಸಲಾರದಷ್ಟು ಸಾವು-ನೋವು ಸಂಭವಿಸಿತ್ತು. ಈ ಮಧ್ಯೆ ದೇಶದಲ್ಲಿ ಕೊರೊನಾದಿಂದ ಸತ್ತವರ ಲೆಕ್ಕ ಕೈ ತಪ್ಪಿಹೋಗಿದೆಯಾ ಅನ್ನೋ ಅನುಮಾನಗಳು ಶುರುವಾಗಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಕಿಅಂಶದ ಪ್ರಕಾರ ದೇಶದಲ್ಲಿ ಲಕ್ಷಾಂತರ ಮಂದಿಯ ಸಾವಿಗೆ ಕಾರಣವೇ ತಿಳಿದುಬಂದಿಲ್ಲ. ಕೊರೊನಾ ಮೊದಲನೇ ಅಲೆಯ 6-7 ತಿಂಗಳಲ್ಲಿ ಸಂಭವಿಸಿದ್ದ ಸಾವು- ಸೋಂಕಿತರ ಸಂಖ್ಯೆ, 2ನೇ ಅಲೆಯಲ್ಲಿಯ ಕೇವಲ 2 ತಿಂಗಳಲ್ಲಿ ಘಟಿಸಿದೆ. 2ನೇ ಅಲೆಯಲ್ಲಿ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮರಣ ಮೃದಂಗ ಬಾರಿಸಿದೆ. ಜ್ವರ, ಶ್ವಾಸಕೋಶದ ಸೋಂಕು ಹಾಗೂ ಕಾರಣ ಗೊತ್ತಿಲ್ಲದೆ ಮೃತಪಟ್ಟವರ ಲೆಕ್ಕ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಕಿ ಅಂಶದಿಂದ ಸಾವಿನ ರಹಸ್ಯ ಬಯಲಾಗಿದೆ. ಕಳೆದ ವರ್ಷದ ಸಾವಿಗಿಂತ ಎರಡೂವರೆ ಪಟ್ಟು ಈ ವರ್ಷದ ಸಾವಿನ ಸಂಖ್ಯೆ ಹೆಚ್ಚಿದೆ.
ದೇಶದಲ್ಲಿ 2020 ಮೇ ತಿಂಗಳಲ್ಲಿ ಮೃತಪಟ್ಟವರ ಸಂಖ್ಯೆ 1,85,994 ರಷ್ಟಿದ್ದರೆ, 2021ರ ಮೇ ತಿಂಗಳಿನಲ್ಲೇ 5 ಲಕ್ಷಕ್ಕೂ ಅಧಿಕ ಸಾವು ಸಂಭವಿಸಿದೆ. ಇದರಲ್ಲಿ ಕೊರೊನಾಗೆ 3 ಲಕ್ಷಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.
ಇನ್ನೂ ಏಪ್ರಿಲ್ ತಿಂಗಳಿನಲ್ಲಿ 2020ರಲ್ಲಿ 1,64,586 ಮಂದಿ ಮೃತಪಟ್ಟಿದ್ದರು, ಈ ವರ್ಷ ಅಂದರೆ 2021 ಏಪ್ರಿಲ್ನಲ್ಲಿ 3,12,834 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 1,43,475 ಮಂದಿಯ ಸಾವಿನ ಕಾರಣ ಗೊತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಅಲ್ಲದೆ ಶ್ವಾಸಕೋಶದ ಕಾಯಿಲೆ ಇಂದ ಮೃತಪಟ್ಟವರು (TB ಹೊರತು ಪಡಿಸಿ) 27,805 ಮಂದಿ ಹಾಗೂ ಜ್ವರದ ಕಾರಣಕ್ಕಾಗಿ 7,498 ಮಂದಿ ಮೃತಪಟ್ಟಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನ ವರದಿ ಮಾಡಿದೆ.