ಬೆಂಗಳೂರು/ಚೆನ್ನೈ: ಹಿಜಾಬ್ ತೀರ್ಪು ಪ್ರಕಟಿಸಿದ ರಾಜ್ಯ ಹೈಕೋರ್ಟ್‌ನ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆ ಹಾಕಿರುವ ಗಂಭೀರ ಆರೋಪದಡಿ ಇಬ್ಬರು ಕಿಡಿಗೇಡಿಗಳನ್ನು ತಮಿಳುನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ತಮಿಳುನಾಡಿನ ತಿರುನೆಲ್‌ವೇಲಿ ಎಂಬಲ್ಲಿ ಕೊವಾಯಿ ರಹಮುತುಲ್ಲಾ ಹಾಗು ತಂಜಾವೂರಿನಲ್ಲಿ ಎಸ್.ಜಮಾಲ್ ಮೊಹಮ್ಮದ್ ಉಸ್ಮಾನಿ ಎಂಬಾತನನ್ನು ಶನಿವಾರ ರಾತ್ರಿ ಸೆರೆ ಹಿಡಿಯಲಾಗಿದೆ. ಈ ಇಬ್ಬರು ದುಷ್ಕರ್ಮಿಗಳು ತಮಿಳುನಾಡು ತೌಹೀದ್ ಜಮಾತೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಲವು ದೂರುಗಳು ದಾಖಲಾದ ಬೆನ್ನಲ್ಲೇ ಈ ಆರೋಪಿಗಳಿಗೆ ಪೊಲೀಸರು ಕೈಕೋಳ ತೊಡಿಸಿದ್ದಾರೆ. ಇದೇ ವೇಳೆ ಈ ಇಬ್ಬರ ಹೊರತಾಗಿ ಹಲವರ ವಿರುದ್ಧ ದೂರುಗಳು ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.
ಮಹತ್ವದ ತೀರ್ಪು: 'ಹಿಜಾಬ್ ಇಸ್ಲಾಂ ಧರ್ಮದ ಅಗತ್ಯ ಆಚರಣೆಯಲ್ಲ' ಎಂದು ಕಳೆದವಾರ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಆವಸ್ಥಿ ನೇತೃತ್ವದ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಹಾಗು ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ವಿಶೇಷ ನ್ಯಾಯಪೀಠ ರಿಟ್ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿ ಮಹತ್ವದ ತೀರ್ಪು ನೀಡಿತ್ತು.
ಹೈಕೋರ್ಟ್ ಈ ತೀರ್ಪು ನೀಡಿದ ಬಳಿಕ ತಮಿಳುನಾಡಿನ ಕೆಲವು ಸಂಘಟನೆಗಳು ತೀರ್ಪಿನ ವಿರುದ್ಧ ಪ್ರತಿಭಟನೆ ನಡೆಸಿದ್ದವು. ಇದಾದ ಬಳಿಕ ಪ್ರಕರಣದಲ್ಲಿ ಸದ್ಯ ಬಂಧಿತನಾಗಿರುವ ಕೋವಿ ರಹಮತುಲ್ಲಾ ಎಂಬಾತ ವಿಡಿಯೋ ಮಾಡಿ, ತೀರ್ಪು ನೀಡಿದ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಏಕವಚನದಲ್ಲೇ ನಿಂದಿಸಿ, ಜೀವ ಬೆದರಿಕೆಯನ್ನೂ ಹಾಕಿದ್ದ. ಈ ಸಂಬಂಧ ಬೆಂಗಳೂರಿನ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿದ್ದು, ಎಫ್‌ಐಆರ್ ದಾಖಲಾಗಿತ್ತು.