ಕರ್ನಾಟಕ

karnataka

By

Published : Jul 30, 2021, 10:38 PM IST

ETV Bharat / state

ಹಾಸನದಲ್ಲಿ ಮಂಗಗಳ ಸಾವು ಪ್ರಕರಣ: ಸ್ವಯಂಪ್ರೇರಿತ PIL ದಾಖಲಿಸಿಕೊಳ್ಳಲು ಹೈಕೋರ್ಟ್ ನಿರ್ದೇಶನ

ಮಂಗಗಳ ಮೃತದೇಹಗಳು ಪತ್ತೆಯಾದ ಘಟನೆ ಮನ ಕಲಕುವಂತಿದೆ. ಜೀವಂತವಾಗಿದ್ದ 15ಕ್ಕೂ ಹೆಚ್ಚು ಮಂಗಗಳನ್ನು ದೊಡ್ಡ ಬ್ಯಾಗಿನಲ್ಲಿ ಕಟ್ಟಿಹಾಕಲಾಗಿತ್ತು ಎಂಬುದಂತೂ ಆಘಾತಕಾರಿ ಹಾಗೂ ಅಮಾನವೀಯ ಕೃತ್ಯ ಎಂದು ಪೀಠ ತೀವ್ರ ಬೇಸರ ವ್ಯಕ್ತಪಡಿಸಿದೆ.

Death of monkeys in Hassan:
ಹಾಸನದಲ್ಲಿ ಮಂಗಗಳ ಸಾವು ಪ್ರಕರಣ : ಸ್ವಯಂಪ್ರೇರಿತ PIL ದಾಖಲಿಸಿಕೊಳ್ಳಲು ಹೈಕೋರ್ಟ್ ನಿರ್ದೇಶನ

ಬೆಂಗಳೂರು: ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಚೌಡನಹಳ್ಳಿ ಬಳಿಯ ರಸ್ತೆ ಬದಿಯಲ್ಲಿ ಸಾವನ್ನಪ್ಪಿದ ಮಂಗಗಳು ಪತ್ತೆಯಾದ ಘಟನೆಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಹೈಕೋರ್ಟ್, ಈ ಸಂಬಂಧ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವಂತೆ ರಿಜಿಸ್ಟ್ರಾರ್ ಜನರಲ್‌ ಅವರಿಗೆ ನಿರ್ದೇಶಿಸಿದೆ.

ಇಂದಿನ ಕಲಾಪದ ವೇಳೆ ಮಂಗಗಳ ಅಸಹಜ ಸಾವಿನ ಕುರಿತ ಮಾಧ್ಯಮಗಳ ವರದಿ ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ಅಪಾರ ಸಂಖ್ಯೆಯ ಮಂಗಗಳ ಮೃತದೇಹಗಳು ಪತ್ತೆಯಾದ ಘಟನೆ ಮನ ಕಲಕುವಂತಿದೆ. ಜೀವಂತವಾಗಿದ್ದ 15ಕ್ಕೂ ಹೆಚ್ಚು ಮಂಗಗಳನ್ನು ದೊಡ್ಡ ಬ್ಯಾಗಿನಲ್ಲಿ ಕಟ್ಟಿಹಾಕಲಾಗಿತ್ತು ಎಂಬುದಂತೂ ಆಘಾತಕಾರಿ ಹಾಗೂ ಅಮಾನವೀಯ ಕೃತ್ಯ ಎಂದು ತೀವ್ರ ಬೇಸರ ವ್ಯಕ್ತಪಡಿಸಿತು.

ಅಲ್ಲದೆ, ಈ ಘಟನೆಯು ‘ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ ವರ್ಸಸ್ ನಾಗರಾಜ್’ ನಡುವಿನ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶಕ್ಕೆ ವಿರುದ್ಧವಾಗಿದೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನೂ ಉಲ್ಲಂಘಿಸಲಾಗಿದೆ. ಪ್ರತಿ ಪ್ರಾಣಿಗೂ ಜೀವಿಸುವ ಹಕ್ಕಿದೆ. ಇಂತಹ ಅಮಾನವೀಯ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದು ಅತ್ಯವಶ್ಯಕ.

ಇದನ್ನೂ ಓದಿ:Shocking! ಹಾಸನದ ಚೌಡನಹಳ್ಳಿಯಲ್ಲಿ 30ಕ್ಕೂ ಹೆಚ್ಚು ಮಂಗಗಳ ಮಾರಣಹೋಮ

ಅದೇ ರೀತಿ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ತಡೆಯಲು ಮಾರ್ಗಸೂಚಿ ರೂಪಿಸುವ ಅಗತ್ಯವಿದೆ. ಆದ್ದರಿಂದ ಈ ಕುರಿತಂತೆ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸುವಂತೆ ರಿಜಿಸ್ಟ್ರಾರ್ ಜನರಲ್‌ ಅವರಿಗೆ ಪೀಠ ನಿರ್ದೇಶಿಸಿತು.

ಅರ್ಜಿಯಲ್ಲಿ ರಾಜ್ಯ ಸರ್ಕಾರ, ಅರಣ್ಯ ಇಲಾಖೆ, ಹಾಸನ ಡಿಸಿ, ಎಸ್ಪಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯನ್ನು ಪ್ರತಿವಾದಿಯಾಗಿಸಬೇಕು. ಘಟನೆ ಕುರಿತ ಸಂಪೂರ್ಣ ವರದಿ ಮತ್ತು ಈವರೆಗೂ ಕೈಗೊಂಡಿರುವ ಕ್ರಮಗಳ ಕುರಿತು ಹಾಸನ ಜಿಲ್ಲಾಧಿಕಾರಿ ಆಗಸ್ಟ್ 4ರಂದು ವರದಿ ಸಲ್ಲಿಸಬೇಕು. ಸರ್ಕಾರಿ ವಕೀಲರು ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಗತ್ಯ ನೆರವು ನೀಡಬೇಕು ಎಂದು ಸೂಚಿಸಿತು.

ABOUT THE AUTHOR

...view details