ಬೆಂಗಳೂರು:ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲಾಗಿದ್ದ ವಿದೇಶಿ ಪ್ರಜೆ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಮೃತನ ಕಡೆಯವರು ಜೆ.ಸಿ.ನಗರದ ಠಾಣೆಯ ಮುಂಭಾಗ ಪ್ರತಿಭಟನೆ ನಡೆಸಿದ ಹಿನ್ನೆಲೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅತಿ ಹೆಚ್ಚು ವಿದೇಶಿ ಪ್ರಜೆಗಳನ್ನ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಅದೇ ರೀತಿ ಡ್ರಗ್ಸ್ ಕೇಸ್ಗೆ ಸಂಬಂಧಿಸಿದಂತೆ ಆಫ್ರಿಕಾ ಪ್ರಜೆ ಜೊವಲ್ ಮಲ್ಲು ಎಂಬವನನ್ನು ಜೆ.ಸಿ. ನಗರ ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿ ಆರೋಪಿ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ.
ಇದರಿಂದ ಆಕ್ರೋಶಗೊಂಡ ಆರೋಪಿಯ ಕಡೆಯವರು ಜೆ.ಸಿ. ನಗರ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದರು. ಅಲ್ಲದೆ ಸಿಗರೇಟ್ ಸೇದುತ್ತಾ, ಪೊಲೀಸರನ್ನು ನಿಂದಿಸುತ್ತಾ ಹೈಡ್ರಾಮಾ ಸೃಷ್ಟಿಸಿದರು. ಪೊಲೀಸರ ಮೇಲೆ ಹಲ್ಲೆಗೂ ಮುಂದಾದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಏಟು ಬೀಳುತ್ತಿದ್ದಂತೆ ವಿದೇಶಿಗರು ಸ್ಥಳದಿಂದ ಕಾಲ್ಕಿತ್ತರು.