ಬೆಂಗಳೂರು:ದೇಶದ ಹಲವೆಡೆಹಕ್ಕಿಜ್ವರ ಭೀತಿಯಿದ್ದು ರಾಜ್ಯದಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಸಭೆಗಳನ್ನು ನಡೆಸಿ ಪರಿಸ್ಥಿತಿ ಎದುರಿಸಲು ಸಿದ್ಧರಾಗಿದ್ದಾರೆ.
ಈ ಮಧ್ಯೆ ಶಿವಮೊಗ್ಗದಲ್ಲಿ 6 ಹಕ್ಕಿಗಳು ಹಾಗೂ ದಕ್ಷಿಣ ಕನ್ನಡದಲ್ಲಿ 6 ಕಾಗೆಗಳು ಸತ್ತುಬಿದ್ದಿವೆ. ಇದು ಹೆಚ್ಚು ಮಳೆಯಾದ ಕಾರಣಕ್ಕಾಗಿ ಸತ್ತಿವೆಯೇ ಅಥವಾ ಹಕ್ಕಿಜ್ವರದ ಸೋಂಕಿನಿಂದಲೇ ಸತ್ತಿದೆಯೇ ಎಂದು ಪರೀಕ್ಷಿಸಲಾಗುತ್ತಿದೆ.
ಮೇಲ್ನೋಟಕ್ಕೆ ಹಕ್ಕಿಜ್ವರದ ಲಕ್ಷಣ ಇಲ್ಲದಿದ್ದರೂ, ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕರಾದ ಡಾ. ಉಮಾಪತಿ ಮಾತನಾಡಿ, ವೈರಸ್ನಿಂದ ಬರುವ ಈ ಖಾಯಿಲೆ ಯಾವ ಹಕ್ಕಿಗೆ ಬೇಕಾದರೂ ಬರುವ ಸಾಧ್ಯತೆ ಇರುತ್ತದೆ. ಇದಕ್ಕೆ ಈಗಾಗಲೇ ರ್ಯಾಪಿಡ್ ರೆಸ್ಪಾನ್ಸ್ ಟೀಮ್ ಮಾಡಲಾಗಿದೆ. ಎಲ್ಲಾದರೂ ಸೋಂಕು ಕಂಡುಬಂದರೆ ಆ ಕೋಳಿ ಅಂಗಡಿ ಅಥವಾ ಕೋಳಿ ಫಾರ್ಮ್ಗೆ ಹೋಗಿ ಎಲ್ಲವನ್ನು ತೆರವು ಮಾಡಿ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೆ ಯಾವುದೇ ಪ್ರಕರಣ ಕಂಡುಬಂದಿಲ್ಲ. ಜನ ಭಯಬೀಳುವ ಅಗತ್ಯವಿಲ್ಲ. ಆದರೆ ಕೋಳಿ ಉದ್ಯಮದ ಮೇಲೆ ಸ್ವಲ್ಪ ಪರಿಣಾಮ ಬಿದ್ದಿದೆ. ಒಂದು ವೇಳೆ ಕೋಳಿಗಳ ಅಸಹಜ ಸಾವು ಕಂಡುಬಂದರೂ ಲ್ಯಾಬ್ಗೆ ತೆಗೆದುಕೊಂಡು ಹೋಗಿ ಪರೀಕ್ಷಿಸಲಾಗುತ್ತದೆ. ಅದೇನಾದರೂ ಪಾಸಿಟಿವ್ ಕಂಡುಬಂದರೆ ಫಾರ್ಮನ್ನೇ ಮುಚ್ಚಲಾಗುತ್ತದೆ ಎಂದಿದ್ದಾರೆ.