ಬೆಂಗಳೂರು: ರಸ್ತೆಗುಂಡಿ ಮುಚ್ಚಲು ಇಂದಿನವರೆಗೆ ಇದ್ದ ಕಾಲಾವಕಾಶವನ್ನು ಮಳೆಯ ಕಾರಣದಿಂದಾಗಿ ನವೆಂಬರ್ 19 ರವರೆಗೆ ಮುಂದೂಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಅವರು, ಮೇ ತಿಂಗಳಿಂದ ಇಲ್ಲಿಯವರೆಗೂ 33 ಸಾವಿರ ರಸ್ತೆಗುಂಡಿ ಗುರುತಿಸಲಾಗಿದೆ.
ಈ ಪೈಕಿ 32 ಸಾವಿರ ಗುಂಡಿಗಳನ್ನು ಮುಚ್ಚಲಾಗಿದ್ದು, 1 ಸಾವಿರ ಗುಂಡಿಗಳು ಮಾತ್ರ ಬಾಕಿ ಉಳಿದಿವೆ. ರಸ್ತೆಗುಂಡಿ ಸಂಪೂರ್ಣವಾಗಿ ಮುಚ್ಚಲು ನವೆಂಬರ್ 14ರವರೆಗೆ ಗಡುವು ನೀಡಲಾಗಿತ್ತು. ಆದರೆ, ಮತ್ತೆ ಮಳೆ ಬಂದಿದ್ದರಿಂದ ಗಡುವು ಅವಧಿ ವಿಸ್ತರಿಸಲಾಗಿದ್ದು, ನವೆಂಬರ್ 19 ರ ವರೆಗೆ ಅಧಿಕಾರಿಗಳಿಗೆ ಕಾಲಾವಕಾಶ ನೀಡಲಾಗಿದೆ. ನವೆಂಬರ್ 17 ರವರೆಗೂ ಮಳೆ ಮುನ್ಸೂಚನೆ ಇದೆ. ಆದರೂ ನವೆಂಬರ್ 19 ಶನಿವಾರದೊಳಗೆ ಎಲ್ಲ ರಸ್ತೆಗುಂಡಿ ರಿಪೇರಿ ಮಾಡುತ್ತೇವೆ ಎಂದರು.
ಅಂತೆಯೇ ವಾಟ್ಸ್ಆ್ಯಪ್ನಲ್ಲಿ ಬಂದ ದೂರುಗಳಿಗೂ ಸ್ಪಂದಿಸಲಾಗುತ್ತಿದೆ. ಪಾತ್ ಹೋಲ್ ಫ್ರೀ ಝೋನ್ ಎಂದು ಬಿಬಿಎಂಪಿ ಘೋಷಣೆ ಮಾಡಲಿದೆ. ಬುಧವಾರ ಸಂಜೆಯಿಂದ ಈ ಘೋಷಣೆ ಆಗಲಿದೆ. ಹೊಸ ನಿಯಮದ ಪ್ರಕಾರ ಯಾವ ಏಜೆನ್ಸಿಯವರು ರಸ್ತೆ ಅಗೆಯುತ್ತಾರೋ ಅವರೇ ರಿಪೇರಿ ಮಾಡಬೇಕಿತ್ತು.