ಬೆಂಗಳೂರು :2022-23ನೇ ಸಾಲಿನಲ್ಲಿ ಶಿಕ್ಷಣ ಹಕ್ಕು ಕಾಯಿದೆಯಡಿ(ಆರ್‌ಟಿಇ) ಸೀಟು ಕೋರಿ ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಲಾಗಿದೆ. ಫೆಬ್ರವರಿ 3 ರಿಂದ ಮಾರ್ಚ್ 3ರವರೆಗೆ ಒಂದು ತಿಂಗಳವರೆಗೆ ಅರ್ಜಿಗಳನ್ನ ಸ್ವೀಕರಿಸಲಾಗುತ್ತೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ-2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಪ್ರಕಾರ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಇಚ್ಚಿಸುವ ಪೋಷಕರು ಅರ್ಜಿ ಸಲ್ಲಿಸುವ ಅರ್ಜಿದಾರರು ತಮ್ಮ ವ್ಯಾಪ್ತಿಯ ನೆರೆಹೊರೆ ಶಾಲೆಗಳ ಮಾಹಿತಿಯನ್ನು ಇಲಾಖಾ ವೆಬ್‌ಸೈಟ್ http://www.schooleducation.kar.nic.inರಲ್ಲಿ ಖಚಿತಪಡಿಸಿಕೊಂಡು ದಾಖಲಾತಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕುಸಿತ ಸಾಧ್ಯತೆ ಇದೆ. ಕಳೆದ ವರ್ಷ 14 ಸಾವಿರ ಸೀಟುಗಳಲ್ಲಿ 3 ಸಾವಿರ ಸೀಟು ಮಾತ್ರ ಭರ್ತಿಯಾಗಿದ್ದವು. ಆರ್‌ಟಿಇ ಸೀಟು ಪಡೆಯಲು ಪೋಷಕರು ನಿರಾಸಕ್ತಿ ಹೊಂದಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ ಮಕ್ಕಳ ದಾಖಲಾತಿ ಮೇಲೆಯೂ ಪರಿಣಾಮ ಬೀರಿದೆ. ಅಂದಾಜು ಶೇ.25ರಿಂದ 30ರಷ್ಟು ಮಕ್ಕಳು ದಾಖಲಾಗಿಲ್ಲ.
ಇದು ಮುಂದಿನ ವರ್ಷದ ಆರ್‌ಟಿಇ ಮೇಲೆಯೂ ಪರಿಣಾಮ ಬೀರಿದೆ. ಪ್ರತಿ ಬಾರಿಯೂ ಹಿಂದಿನ ವರ್ಷದ ದಾಖಲಾತಿ ಆಧಾರದಲ್ಲಿ ಖಾಸಗಿ ಶಾಲೆಗಳಿಗೆ ಶೇ.25ರಷ್ಟು ಆರ್‌ಟಿಇ ಸೀಟುಗಳು ನಿಗದಿ ಮಾಡಲಾಗುತ್ತದೆ. ಸದ್ಯ ಕೊರೊನಾ ಭೀತಿ, ಶಾಸಗಿ ಶಾಲೆಗಳ ಶುಲ್ಕ ಹೆಚ್ಚಳ, ಆನ್ಲೈನ್ ತರಗತಿಗಳಿಗೆ ಸೂಕ್ತ ಪರಿಕರ ಕೊರತೆ, ಆರ್ಥಿಕ ಬಿಕ್ಕಟ್ಟು ಸೇರಿದಂತೆ ಹಲವು ಕಾರಣದಿಂದ ಮಕ್ಕಳ ದಾಖಲಾತಿ ಕುಸಿತ ಆಗಿದೆ. ರಾಜ್ಯಾದ್ಯಂತ ಒಟ್ಟು 14,042 ಸೀಟುಗಳಲ್ಲಿ ಕೇವಲ 3,063 ಸೀಟುಗಳಿಗಷ್ಟೇ ಮಕ್ಕಳು ದಾಖಲಾಗುತ್ತಿದ್ದಾರೆ.
ಆರ್‌ಟಿಇ ಇಂದ ದೂರ ಉಳಿದು ಬಿಟ್ಟರೆ ಪೋಷಕರು :ಆರ್‌ಟಿಇ ಸೀಟು ನೀಡುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಮೂಲಸೌಕರ್ಯದ ಕೊರತೆ ಇದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣವಿಲ್ಲ ಎಂಬುದು ಪೋಷಕರ ದೂರು. ಕಲಿಕೆಯ ವಿಷಯದಿಂದ ಹಿಡಿದು ಶೌಚಾಲಯ, ಆಟದ ಮೈದಾನ ಸೇರಿದಂತೆ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸೀಟುಗಳನ್ನು ನೀಡುವುದನ್ನು ನಿಲ್ಲಿಸಿದ ಬಳಿಕ ಬೆರಳೆಣಿಕೆಯಷ್ಟು ಶಾಲೆಗಳಿಗೆ ಸೀಟು ನೀಡಲಾಗುತ್ತಿದೆ.
ಈ ಶಾಲೆಗಳಿಗೆ ಹೋಲಿಸಿಕೊಂಡರೆ ಸರ್ಕಾರಿ ಶಾಲೆಗಳೇ ಉತ್ತಮವಾಗಿವೆ ಎಂಬ ಕಾರಣಕ್ಕೆ ಪೋಷಕರು ಆರ್ಟಿಇಗೆ ಅರ್ಜಿ ಸಲ್ಲಿಸುವುದನ್ನ ನಿಲ್ಲಿಸಿದ್ದಾರೆ. ಜೊತೆಗೆ ಆರ್‌ಟಿಇ ಅಡಿಯಿಂದ ದಾಖಲಾದ ಬಳಿಕವೂ ಸಾಕಷ್ಟು ಶಾಲೆಗಳಲ್ಲಿ ಇತರೆ ಚಟುವಟಿಕೆಗಾಗಿ ಶುಲ್ಕದ ಒತ್ತಾಯ ಕೇಳಿ ಬಂದ ಕಾರಣ ಆರ್‌ಟಿಇ ಸೀಟಿಗಾಗಿ ಪೋಷಕರು ದೂರ ಹೋಗುತ್ತಿದ್ದಾರೆ.
ಓದಿ:ಬಿಜೆಪಿಯಿಂದ ಯಾವ ಶಾಸಕರು ಸಹ ಕಾಂಗ್ರೆಸ್ಗೆ ಹೋಗುವುದಿಲ್ಲ: ಸಚಿವ ಗೋವಿಂದ ಕಾರಜೋಳ