ಬೆಂಗಳೂರು :ರಾಜಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಇಎಸ್ಐ ಆಸ್ಪತ್ರೆಯಲ್ಲಿ ಸರಿ ಸುಮಾರು 15 ತಿಂಗಳ ನಂತರ ಕೊರೊನಾಗೆ ಬಲಿಯಾದ ಇಬ್ಬರ ಮೃತದೇಹಗಳನ್ನು ಶವಾಗಾರದಿಂದ ಹೊರ ತೆಗೆದ ಅಮಾನವೀಯ ಘಟನೆ ನಡೆದಿತ್ತು.
ಈ ಘಟನೆ ಬೆಳಕಿಗೆ ಬಂದ ಕೂಡಲೇ ಮೃತದೇಹಗಳನ್ನು ವಿಕ್ಟೋರಿಯಾ ಶವಾಗಾರಕ್ಕೆ ರವಾನಿಸಿದ್ದಾರೆ. ತಕ್ಷಣ ಮೃತರ ಸಂಬಂಧಿಕರನ್ನು ಪೊಲೀಸರು ಕರೆಯಿಸಿದ್ದಾರೆ. ಸಂಬಂಧಿಕರು ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಮೃತರ ಸಂಬಂಧಿಕರು ಆಸ್ಪತ್ರೆಗೆ ಬಳಿ ಆಗಮಿಸಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮೃತ ವ್ಯಕ್ತಿಯ ಮಗಳು ಚೇತನಾ, ''ನಮ್ಮ ತಂದೆ ಕೊರೊನಾದಿಂದ ಮೃತಪಟ್ಟ ವೇಳೆ ಆಸ್ಪತ್ರೆಗೆ ಹೋಗಿ ಕೇಳಿದಾಗ ಅಂತ್ಯಕ್ರಿಯೆ ಆಗಿದೆ ಎಂದಿದ್ದರು. ತಮ್ಮ ಬೇಜವಾಬ್ದಾರಿಯಿಂದ ಈ ತಪ್ಪು ನಡೆದಿದೆ ಎಂದು ಒಪ್ಪಿಕೊಂಡಿದ್ದಾರೆ.
ವಿಷಯ ತಿಳಿದು ತುಂಬಾ ಬೇಸರವಾಗುತ್ತಿದೆ. ಅಂತ್ಯಕ್ರಿಯೆ ವೇಳೆ ನಮ್ಮ ಬಳಿ ಸಹಿ ತೆಗೆದುಕೊಂಡಿಲ್ಲವಲ್ಲ ಎಂದು ಪ್ರಶ್ನಿಸಿದ್ದಕ್ಕೆ ಈಗ ಸಹಿ ಮಾಡಿ ಎನ್ನುತ್ತಿದ್ದಾರೆ. ಮೊನ್ನೆ ಹೋಗಿ ಬಿಯು ನಂಬರ್ ಬಗ್ಗೆ ಮಾಹಿತಿ ಕೇಳಿದಾಗ ನೀವಿಲ್ಲಿಗೆ ಬರಲೇಬೇಡಿ, ನಮ್ಮ ಹತ್ತಿರ ಏನೂ ಇಲ್ಲ ಎಂದು ಗದರಿದ್ದರು.
ಈಗ ಆಸ್ಪತ್ರೆಯವರೆ ಅಂತ್ಯಸಂಸ್ಕಾರ ಮಾಡುತ್ತೇವೆ ಎನ್ನುತ್ತಿದ್ದಾರೆ. ಶಾಸಕರು ಕೂಡ ಈ ಬಗ್ಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ನಮಗೆ ನ್ಯಾಯ ಸಿಗಬೇಕು. ನಾವು ದೂರು ಸಹ ಕೊಡುತ್ತೇವೆ'' ಎಂದು ಹೇಳಿದರು.