ಬೆಂಗಳೂರು :ಒಳಚರಂಡಿ ದುರಸ್ಥಿಗಾಗಿ ಬಿಬಿಎಂಪಿ ಸಿಬ್ಬಂದಿ ಕಾಮಗಾರಿ ನಡೆಸುವಾಗ ಮೋರಿಯಲ್ಲಿ ಶವ ಪತ್ತೆ ಸಂಬಂಧ ಮೃತದೇಹದ ಸುತ್ತಮುತ್ತ ಇರುವ ಮಣ್ಣು ಸಂಗ್ರಹಣೆ ಹಾಗೂ ಮೃತದೇಹದ ಸ್ಯಾಂಪಲ್ ಪಡೆದು ಡಿಎನ್ಎ ಪರೀಕ್ಷೆಗೆ ರವಾನಿಸಲಾಗಿದೆ.
ಕಳೆದ 4 ವರ್ಷದ ಹಿಂದೆ ಬಿಬಿಎಂಪಿ ಮೋರಿ ಕಾಮಗಾರಿ ನಡೆಸಿತ್ತು. ಆ ವೇಳೆ ಕೊಲೆ ಮಾಡಿ ಹೂತು ಹಾಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ 4 ವರ್ಷದಿಂದ ದಾಖಲಾಗಿರುವ ಮಿಸ್ಸಿಂಗ್ ಕಂಪ್ಲೇಂಟ್ಗಳ ಪರಿಶೀಲನೆ ನಡೆಸಲಾಗುತ್ತಿದೆ.
ಮೃತದೇಹದ ಸ್ಯಾಂಪಲ್ ಎಫ್ಎಸ್ಎಲ್ಗೆ ರವಾನೆ.. ಈಗಾಗಲೇ ಎಲ್ಲ ಪೊಲೀಸ್ ಠಾಣೆಗಳಿಗೆ ಫೋಟೋ ಕಳುಹಿಸಲಾಗಿದೆ. ಮೃತ ವ್ಯಕ್ತಿಯ ಚಹರೆ ಹೋಲುತ್ತದೆ ಎಂದು ಕೇಳಿಕೊಂಡು ಬಂದರೆ ತನಿಖೆ ನಡೆಸಲಾಗುವುದು. 4 ವರ್ಷದ ಹಿಂದೆ ಮೋರಿ ನಿರ್ಮಾಣ ಗುತ್ತಿಗೆ ಪಡೆದಿದ್ದವರ ವಿಚಾರಣೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಮತ್ತು ಡಿಎನ್ಎ ವರದಿ ಬಂದ ನಂತರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ನಿನ್ನೆ ಕಾಮಾಕ್ಷಿಪಾಳ್ಯ ಸಂಚಾರಿ ಠಾಣೆಯ ಮುಂಭಾಗದ ಹೆಚ್ ಬಿ ಕಲ್ಯಾಣ ಮಂಟಪದ ಬಳಿಯ ಚರಂಡಿಯಲ್ಲಿ ಶವ ಪತ್ತೆಯಾಗಿತ್ತು. ಇನ್ನೂ ಮೃತಪಟ್ಟಿರುವವರ ಹೆಸರು, ವಿಳಾಸ ಗೊತ್ತಾಗಿಲ್ಲ. ಈ ಹಿಂದೆ ದಾಖಲಾಗಿದ್ದ ನಾಪತ್ತೆ ಪ್ರಕರಣಗಳ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.