ಬೆಂಗಳೂರು:ಟ್ರಕ್‌ನಲ್ಲಿ ಹಸು ಮಾಂಸ ತ್ಯಾಜ್ಯ ಸಾಗಣೆ ಆರೋಪದ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ಸಾಮಾಜಿಕ ಮಾಧ್ಯಮ ಎಕ್ಸ್(ಹಿಂದಿನ ಟ್ವಿಟರ್)ನಲ್ಲಿ ಪ್ರತಿಕ್ರಿಯಿಸಿದ್ದಾರೆ. "ಟ್ರಕ್‌ನಲ್ಲಿ ಇದ್ದದ್ದು ಹಸು ಮಾಂಸದ ತ್ಯಾಜ್ಯವಲ್ಲ. ಅದರಲ್ಲಿ ಪತ್ತೆಯಾದ ಮೂಳೆಗಳು, ಕೊಂಬುಗಳು, ಚರ್ಮ ಹಸುವಿನದ್ದಲ್ಲ. ಹಾಗೂ ಅದು ಬಿಬಿಎಂಪಿ ಪೂರ್ವ ವಿಭಾಗದ ಪಶುಸಂಗೋಪನೆ ಕಸಾಯಿಖಾನೆಯಿಂದ ಅಧಿಕೃತ ವ್ಯಾಪಾರಿಗೆ ಪ್ರಮಾಣೀಕರಿಸಲಾಗಿದೆ" ಎಂದು ಸ್ಪಷ್ಟಪಡಿಸಿದ್ದಾರೆ.
'ಟ್ರಕ್‌ನಲ್ಲಿ ಮಾಂಸದ ತ್ಯಾಜ್ಯ ಸಾಗಿಸಲಾಗುತ್ತಿದೆ. ಅದು ಹಸುವಿನ ಮಾಂಸದ ತ್ಯಾಜ್ಯ ಎಂಬ ಅನುಮಾನವಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಬೊಮ್ಮನಹಳ್ಳಿ ಠಾಣಾ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಗೋ ಹತ್ಯೆ ಕಾನೂನು ಬಾಹಿರ' ಎಂದು ಬುಧವಾರ ತಮ್ಮ ಸಾಮಾಜಿಕ ಜಾಲತಾಣ ಖಾತೆ ಎಕ್ಸ್ನಲ್ಲಿ ನಟಿ ಐಂದ್ರಿತಾ ರೈ ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ, ನಗರ ಪೊಲೀಸ್ ಆಯುಕ್ತರು ಹಾಗೂ ಆಗ್ನೇಯ ವಿಭಾಗದ ಡಿಸಿಪಿಗೆ ಟ್ಯಾಗ್ ಮಾಡಿ ವಿಡಿಯೋ ಪೋಸ್ಟ್ ಮಾಡಿದ್ದರು.
ನಟಿಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ. ಬಾಬಾ ಟ್ರಕ್ನಲ್ಲಿದ್ದ ಮಾಂಸದ ತ್ಯಾಜ್ಯ ಪರಿಶೀಲನೆ ನಡೆಸಲಾಗಿದೆ. ಅದು ಹಸುವಿನದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಗೋಮಾಂಸ ಮಾರಾಟಕ್ಕೆ ಯತ್ನ- ಆರೋಪಿಗಳು ವಶಕ್ಕೆ:ಇತ್ತೀಚೆಗೆಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ದೇವದಾನ ಗ್ರಾಮದಲ್ಲಿ ಹಸುವನ್ನ ಕೊಂದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಭಜರಂಗದಳ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ದೇವದಾನ ಸಮೀಪದ ಕಡ್ಲೆಮಕ್ಕಿ ಗ್ರಾಮದ ಇಬ್ರಾಹಿಂ ಹಾಗೂ ಷರೀಫ್ ಬಂಧಿತ ಆರೋಪಿಗಳು. ಈ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿತ್ತು.