ಬೆಂಗಳೂರು: ಅಕ್ರಮ ಆಸ್ತಿ ಸಂಪಾದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪಿನ ಬಗ್ಗೆ ನನಗೆ ಮಾಹಿತಿ ಇಲ್ಲ. ನ್ಯಾಯಾಲಯದ ವಿಚಾರದಲ್ಲಿ ವಕೀಲರಿಂದ ಸರಿಯಾದ ಮಾಹಿತಿ ಇಲ್ಲದೇ ಈ ವಿಚಾರದ ಬಗ್ಗೆ ಮಾತನಾಡುವುದಿಲ್ಲ ಎಂದು ಹೈಕೋರ್ಟ್ ತೀರ್ಪಿನ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ವಕೀಲರು ಮಾಹಿತಿ ನೀಡದ ಹೊರತು ಮಾತನಾಡಲ್ಲ: ಅರಮನೆ ಆವರಣದಲ್ಲಿ ನಡೆದ ಟೆಕ್ ಸಮಿಟ್ ಕಾರ್ಯಕ್ರಮದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನನ್ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ಆದೇಶ ನೀಡಿದೆ. ಆದರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಸದ್ಯ ನಾನು ಟೆಕ್ ಸಮಿಟ್ನಲ್ಲಿ ಭಾಗವಹಿಸಲು ಬಂದಿದ್ದೇನೆ. ಹಾಗಾಗಿ ನ್ಯಾಯಾಲಯದಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಗೊತ್ತಿಲ್ಲದೇ ಮಾತನಾಡುವುದು ಸರಿಯಲ್ಲ. ವಕೀಲರು ನಮಗೆ ಮಾಹಿತಿ ನೀಡದ ಹೊರತಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.
ನಾನೇನು ತಪ್ಪು ಮಾಡಿಲ್ಲ. ಎಲ್ಲ ಬೆಳವಣಿಗೆಗಳನ್ನು ನೀವು (ಮಾಧ್ಯಮದವರು) ಜನರು ನೋಡಿದ್ದಾರೆ. ನಾನು ಕೇವಲ ಪಕ್ಷದ ಕೆಲಸ ಮಾತ್ರ ಮಾಡಿದ್ದೇನೆ. ಪಕ್ಷದ ಕೆಲಸ ಮಾಡಿದ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ಮುಂದಕ್ಕೂ ತೊಂದರೆ ಕೊಟ್ಟರೆ ಕಾಪಾಡಲು ಆ ಭಗವಂತ ಇದ್ದಾನೆ, ಈ ನಾಡಿನ ಜನರಿದ್ದಾರೆ. ನನಗೆ ತೊಂದರೆ ಕೊಟ್ಟ ಕಾರಣಕ್ಕೆ ಈ ರಾಜ್ಯದಲ್ಲಿ ಏನಾಯಿತು ಎಂದು ತಿಳಿದಿದೆ. ನನ್ನ ಪರವಾಗಿ ನಿಂತವರು ಹಾಗೂ ಪ್ರಾರ್ಥನೆ ಮಾಡಿದ ಜನರಿಗೆ ಕೋಟಿ ನಮಸ್ಕಾರ ಎಂದರು.
ಯತ್ನಾಳ್ ಮೇಲ್ಮನವಿ:ನನ್ನ ಪ್ರಕರಣದಲ್ಲಿ ಯತ್ನಾಳ್ ಮೇಲ್ಮನವಿ ಸಲ್ಲಿಸಿದ್ದಾರೆ, ಎಲ್ಲರ ಆಚಾರ ವಿಚಾರ, ಭಾವನೆ ಮತ್ತು ಅವರುಗಳ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಬಹಳ ನಮ್ರತೆಯಿಂದ ಗಮನಿಸಿದ್ದೇನೆ. ಸೂಕ್ತ ಕಾಲದಲ್ಲಿ ಇದಕ್ಕೆಲ್ಲ ಉತ್ತರ ಕೊಡುತ್ತೇನೆ.
ನಿಗಮ ಮಂಡಳಿ ನೇಮಕ ಪಟ್ಟಿ :ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಮೊದಲ ಪಟ್ಟಿಯಲ್ಲಿ ಫಸ್ಟ್ ಟೈಂ ಶಾಸಕರಾದವರಿಗೆ ಅವಕಾಶ ನೀಡಿಲ್ಲ. ಮುಂದಿನ ಪಟ್ಟಿಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅವಕಾಶ ನೀಡಲು ತೀರ್ಮಾನವಾಗಿದೆ. ನಿಗಮ ಮಂಡಳಿ ನೇಮಕಾತಿ, ಕಾರ್ಯಕರ್ತರಿಗೂ ಅವಕಾಶ ನೀಡುವ ಸಂಬಂಧ ನಾನು ಸಿದ್ದರಾಮಯ್ಯ ಹಾಗೂ ಸುರ್ಜೆವಾಲ ಮಾತನಾಡಿದ್ದೇವೆ. ನಾವು ಪಟ್ಟಿಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಅವರಿಗೆ ನೀಡಿದ್ದು, ಅವರು ಅದನ್ನು ದೆಹಲಿಗೆ ತೆಗದುಕೊಂಡು ಹೋಗಿದ್ದಾರೆ.