ಬೆಂಗಳೂರು: ಕುಮಾರಸ್ವಾಮಿ ತಿಹಾರ್ ಜೈಲ್ ಬಗ್ಗೆ ಮಾತನಾಡಿದ್ದಾರೆ. ಅವರು ಏನೇನು ಮಾತಾಡಿಕೊಂಡು ಬಂದಿದ್ದಾರೆ ಗೊತ್ತಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ. ಇಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಐಟಿ ದಾಳಿ ಬಗ್ಗೆ ಹೆಚ್‌ಡಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರ್ಯಾರು ಏನೇನು ಆರೋಪ ಮಾಡ್ತಿದ್ದಾರೆ ಮಾಡಲಿ. ಐಟಿ ಅಧಿಕಾರಿಗಳು ಎಲ್ಲಾ ದಾಖಲೆ ಕೊಡ್ತಾರೆ. ಇವರು ಹೇಳಿದ ತಕ್ಷಣ ಆರೋಪ ಸಾಬೀತಾಗಲ್ಲ. ಕುಮಾರಸ್ವಾಮಿ ತಿಹಾರ್ ಜೈಲ್ ಬಗ್ಗೆ ಮಾತನಾಡಿದ್ದಾರೆ. ಅವರು ಏನೇನು ಮಾತಾಡಿಕೊಂಡು ಬಂದಿದ್ದಾರೆ ಅನ್ನೋದು ಗೊತ್ತಿದೆ. ಯಡಿಯೂರಪ್ಪ ಕಾಲದಲ್ಲಿ ರೇಡ್ ಏನಾಗಿತ್ತು ಅಂತ ಗೊತ್ತಿದೆ ಎಂದು ಟಾಂಗ್ ನೀಡಿದರು.
ನಟಿ ಲೀಲಾವತಿಗೆ ನಿವೇಶನ ಕೊಡುತ್ತೇವೆ:ಹಿರಿಯ ನಟಿ ಲೀಲಾವತಿ ಹಾಗೂ ಅವರ ಪುತ್ರ, ನಟ ವಿನೋದ್ ರಾಜ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶನಿವಾರ ಭೇಟಿ ಮಾಡಿ ತಾವು ನಿರ್ಮಿಸಿರುವ ಪಶುವೈದ್ಯ ಆಸ್ಪತ್ರೆ ಉದ್ಘಾಟನೆಗೆ ಆಹ್ವಾನ ಹಾಗೂ ಬಿಡಿಎ ನಿವೇಶನ ನೋಂದಣಿ ಸಂಬಂಧ ಮನವಿ ಸಲ್ಲಿಸಿದರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಲೀಲಾವತಿ ಅವರನ್ನು ಕಾರಿನ ಬಳಿಯೇ ಬಂದು ಭೇಟಿ ಮಾಡಿದ ಶಿವಕುಮಾರ್ ಅವರು ಯೋಗಕ್ಷೇಮ ವಿಚಾರಿಸಿದರು.
ಹಿರಿಯ ನಟಿ ಲೀಲಾವತಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಆಸ್ಪತ್ರೆ ಉದ್ಘಾಟನೆಗೆ ಬನ್ನಿ ಎಂದು ಕೇಳಿದ್ರು. ಡೇಟ್ ಕೇಳಿದ್ದಾರೆ, ನಾನೇ ಡೇಟ್ ಕೊಡ್ತೇನೆ ಅಂದಿದ್ದೇನೆ. ಆಸ್ಪತ್ರೆಗೆ ಸಹಾಯ ಕೂಡ ಮಾಡ್ತೇನೆ. ಸರ್ಕಾರದಿಂದ ಆಸ್ಪತ್ರೆ ಸಿಬ್ಬಂದಿ ಕೇಳಿದ್ದಾರೆ. ಅವರ ಸೈಟ್ ಹೋಲ್ಡ್ ಆಗಿದೆ, ಏನು ಅಂತ ನೋಡ್ತೇನೆ. ಹಿರಿಯ ನಟಿ ಅವರಿಗೆ ಸೈಟ್ ಕೊಡ್ತೇವೆ ಎಂದು ಭರವಸೆ ನೀಡಿದ್ರು.