ಬೆಂಗಳೂರು:ಬೆಂಗಳೂರಿನ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಕೊರಮಂಗಲ 100 ಅಡಿ ಮುಖ್ಯರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಈಜಿಪುರ ಸಿಗ್ನಲ್ನಿಂದ ಕೇಂದ್ರೀಯ ಸದನ ಜಂಕ್ಷನ್ವರೆಗಿನ ಮೇಲುಸೇತುವೆಯ (ಎಲಿವೇಟೆಡ್ ಕಾರಿಡಾರ್) ಬಾಕಿಯಿರುವ ಕಾಮಗಾರಿಯನ್ನು ಕೂಡಲೇ ಪ್ರಾರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
2.951 ಕಿ.ಮೀ ಉದ್ದದ ಮೇಲುಸೇತುವೆ ನಿರ್ಮಾಣಕ್ಕೆ 2017ರಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಶೇ.29 ರಷ್ಟು ಕೆಲಸ ಮುಗಿದಿದ್ದು, ಕಾಮಗಾರಿ ಸ್ಥಗಿತಗೊಂಡಿದೆ. ಮೆಲುಸೇತುವೆ ನಿರ್ಮಾಣ ಮಾಡುತ್ತಿದ್ದ ಸಂಸ್ಥೆ ಕಾಮಾಗಾರಿ ನಿಲ್ಲಿಸಿದ್ದು, ಸಂಸ್ಥೆಗೆ ನೊಟೀಸ್ ನೀಡಿ ಟರ್ಮಿನೇಟ್ ಮಾಡಲಾಗಿದೆ. ಹೊಸದಾಗಿ ಟೆಂಡರ್ ಕರೆಯಲಾಗಿದೆ ಎಂದು ಸಚಿವರು ತಿಳಿಸಿದರು.
ನಾಲ್ಕು ಪಥದ ಮೇಲುಸೇತುವೆ ಕಾಮಗಾರಿಗೆ ಸುಮಾರು 300 ಕೋಟಿ ರೂ ವ್ಯಯವಾಗಲಿದೆ. ಮೇಲುಸೇತುವೆ ಕೇಂದ್ರೀಯ ಸದನ ಜಂಕ್ಷನ್ ಮತ್ತು ಸೋನಿ ವರ್ಲ್ಡ್ ಜಂಕ್ಷನ್ಗಳ ಮೂಲಕ ಹಾದು ಹೋಗಲಿದೆ. ಕೇಂದ್ರೀಯ ಸದನ ಜಂಕ್ಷನ್ ಮೂಲಕ ತಾವರೆಕರೆ, ಎಂ.ಜಿ.ರಸ್ತೆ, ಹೊಸೂರು ರಸ್ತೆ, ಅಗರ, ಬಿಟಿಎಂ ಲೇಔಟ್, ಕೋರಮಂಗಲ, ಬಿಡಿಎ ಕಾಂಪ್ಲೆಕ್ಸ್, ಸರ್ಜಾಪುರ ಮುಖ್ಯರಸ್ತೆ ಹಾಗೂ ವಿವೇಕನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ ಎಂದರು.
ಸೋನಿ ವರ್ಲ್ಡ್ ಜಂಕ್ಷನ್ ಮೂಲಕ ಇಂದಿರಾನಗರ, ಕೇಂದ್ರೀಯ ಸದನ, ವಿವೇಕನಗರ, ಜಕ್ಕಸಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾದು ಹೋಗುತ್ತವೆ. ಮೇಲುಸೇತುವೆ ನಿರ್ಮಾಣದಿಂದಾಗಿ ಈ ಭಾಗದಲ್ಲಿ ಶೇ.39.69ರಷ್ಟು ವಾಹನ ದಟ್ಟಣೆ ಕಡಿಮೆಯಾಗಲಿದೆ. ಕನಿಷ್ಠ 30 ನಿಮಿಷಗಳಷ್ಟು ಸಮಯ ಉಳಿತಾಯವಾಗಲಿದೆ. ಮೇಲುಸೇತುವೆ ಕಾಮಗಾರಿ ತ್ವರಿತವಾಗಿ ಮುಗಿದರೆ ಈ ಭಾಗದಲ್ಲಾಗುವ ಸಂಚಾರ ದಟ್ಟಣೆ ಬಹುತೇಕ ಕಡಿಮೆಯಾಗಲಿದ್ದು, ವಾಹನ ಸವಾರರಿಗೆ ಸಂಚಾರದಟ್ಟಣೆಯಿಂದ ಮುಕ್ತಿ ಸಿಗಲಿದೆ ಎಂದು ಹೇಳಿದರು.
ಬನಶಂಕರಿ ಬಸ್ ನಿಲ್ದಾಣದ ಬಳಿ 6 ಕಡೆಯಿಂದ ವಾಹನಗಳ ಸಂಚಾರದಿಂದ ಹೆಚ್ಚು ಸಂಚಾರ ದಟ್ಟಣೆಯಾಗಲಿದೆ. ಸಂಚಾರ ದಟ್ಟಣೆಯನ್ನು ನಿವಾರಿಸುವ ಸಲುವಾಗಿ ಬಸ್ ನಿಲ್ದಾಣದ ಜಂಕ್ಷನ್ ಸುತ್ತಲು ಪಾದಚಾರಿ ಮೇಲುಸೇತುವೆ ನಿರ್ಮಾಣ ಹಾಗೂ 2.5 ಕಿ.ಮೀ ಉದ್ದ ಮೇಲುಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಂಚಾರ ದಟ್ಟಣೆ ನಿವಾರಣೆ ಮಾಡಲು ಮತ್ತೊಮ್ಮೆ ಯೋಜನೆ ರೂಪಿಸಿ ಅಂತಿಮ ವಿನ್ಯಾಸ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.